ಉಡುಪಿ: ಮಟ್ಟು ಗ್ರಾಮಕ್ಕೆ ಸ್ವಾಗತ ಕೋರುವ ಮಟ್ಟುಗುಳ್ಳದ ಪ್ರತಿಕೃತಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಘಟನೆ ಗುರುವಾರ ಬೆಳಕಿಗೆ ಬಂದಿದೆ. ವಿಶ್ವದಾದ್ಯಂತ ಬ್ರಾಂಡ್ ಆಗಿರುವ ಮಟ್ಟುಗಳ್ಳದ ಪ್ರತಿಕೃತಿಯನ್ನು ಕಿಡಿಗೇಡಿಗಳು ವಿಕೃತಗೊಳಿಸಿದ್ದಕ್ಕೆ ಸ್ಥಳೀಯರು ವ್ಯಾಪಕವಾಗಿ ಖಂಡಿಸಿದ್ದಾರೆ. ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದಾರೆ.

ಕಟಪಾಡಿಯಿಂದ ಮಟ್ಟು ಗ್ರಾಮಕ್ಕೆ ಹೋಗುವ ಸೇತುವೆ ಬಳಿ “ಐ ಲವ್ ಯು” ಮಟ್ಟು ಎನ್ನುವ ಬರಹ ಹಾಗೂ ಮಟ್ಟು ಗುಳ್ಳದ ಸುಂದರ ಪ್ರತಿಕೃತಿ ಅಳವಡಿಸಲಾಗಿತ್ತು. ಈ ಪ್ರದೇಶದಲ್ಲಿ ಪ್ರವಾಸಿಗರು ಸೆಲ್ಫಿ ಸಹಿತ ಸುಂದರ ಪ್ರಕೃತಿ ಸೌಂದರ್ಯದ ಫೋಟೋಗಳನ್ನು ತೆಗೆದು ಸಂಭ್ರಮ ಪಡುತ್ತಿದ್ದರು. ಇದನ್ನು ಸಹಿಸದ ಕಿಡಿಗೇಡಿಗಳು ಹಾಳುಗೆಡವಿದ್ದು, ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮಟ್ಟು ಗ್ರಾಮದ ಗೌರವ, ರೈತರ ಭಾವನೆ, ವಿಶ್ವಪ್ರಸಿದ್ಧ ಮಟ್ಟು ಗುಳ್ಳದ ಅಸ್ತಿತ್ವದ ಮೇಲಿನ ಅವಮಾನಕರ ಕೃತ್ಯ. ವಿಶ್ವಪ್ರಸಿದ್ಧ “ಮಟ್ಟು ಗುಳ್ಳ” ಎಂಬುದು ಕೇವಲ ಒಂದು ಬೆಳೆ ಅಥವಾ ತರಕಾರಿ ಮಾತ್ರವಲ್ಲ; ಅದು ನಮ್ಮ ಮಟ್ಟು ಗ್ರಾಮದ ಹೆಮ್ಮೆ ಕರಾವಳಿಯ ಸಂಸ್ಕೃತಿ, ರೈತರ ಪರಿಶ್ರಮ ಮತ್ತು ಶ್ರೀ ಕ್ಷೇತ್ರ ಸೋದೆ ಶ್ರೀ ವಾದಿರಾಜ ಸ್ವಾಮೀಜಿ ಅವರ ಪವಿತ್ರ ಪ್ರಸಾದದ ನೆನಪನ್ನು ಹೊತ್ತಿರುವ ಅಮೂಲ್ಯ ಪರಂಪರೆಯಾಗಿದೆ ಎಂದು ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ಸುನಿಲ್ ಡಿ. ಬಂಗೇರ ಹೇಳಿದ್ದಾರೆ.

ದೇಶ-ವಿದೇಶಗಳಲ್ಲಿಯೂ ತನ್ನದೇ ಆದ ವಿಶೇಷ ಸ್ಥಾನವನ್ನು ಪಡೆದಿರುವ ಮಟ್ಟು ಗುಳ್ಳ ಇಂದು ಉಡುಪಿ ಜಿಲ್ಲೆಯ ಗೌರವ ಚಿಹ್ನೆಯಾಗಿ ಗುರುತಿಸಿಕೊಂಡಿದೆ. ಇಂತಹ ವಿಶ್ವಪ್ರಸಿದ್ದ ಮಟ್ಟು ಗುಳ್ಳದ ಮೇಲಿನ ಅಪಾರ ಅಭಿಮಾನ ಮತ್ತು ಪ್ರೀತಿಯಿಂದ ದಾನಿಗಳಾದ ಸುಭಾಷ್ ಎಂ. ಸಾಲಿಯನ್ ನೆಲ್ಲಿಕಟ್ಟೆ ಅವರು “I LOVE MATTU” ಎಂಬ ವಿನ್ಯಾಸದೊಂದಿಗೆ ಮಟ್ಟು ಗುಳ್ಳದ ಆಕರ್ಷಕ ಮಾದರಿಯನ್ನು ನಿರ್ಮಿಸಿ ಗ್ರಾಮಕ್ಕೆ ಸಮರ್ಪಿಸಿದ್ದರು.

ಈ ವಿನ್ಯಾಸವು ಪ್ರವಾಸಿಗರು, ಹಾಗೂ ಯುವಜನರಿಗೆ ಮಟ್ಟು ಗ್ರಾಮದ ಗುರುತಾಗಿ ಪರಿಣಮಿಸಿತ್ತು. ಆದರೆ ಅತ್ಯಂತ ದುಃಖಕರ ಸಂಗತಿಯೆಂದರೆ, ಕೆಲವು ದುಷ್ಕರ್ಮಿಗಳು ರಾತ್ರಿ ವೇಳೆ ಈ ಮಾದರಿಯನ್ನು ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಿ ಪುಡಿ ಮಾಡಿರುವ ಘಟನೆ ನಡೆದಿದೆ. ಇದು ಕೇವಲ ಒಂದು ಮಾದರಿಯ ಮೇಲಿನ ದಾಳಿ ಅಲ್ಲ; ಮಟ್ಟು ಗ್ರಾಮದ ಗೌರವ, ರೈತರ ಭಾವನೆ, ಮತ್ತು ವಿಶ್ವಪ್ರಸಿದ್ಧ ಮಟ್ಟು ಗುಳ್ಳದ ಅಸ್ತಿತ್ವದ ಮೇಲಿನ ಅವಮಾನಕರ ಕೃತ್ಯವಾಗಿದೆ.

ಮಟ್ಟು ಗುಳ್ಳ ಬೆಳೆಗಾರರ ಸಂಘ ಈ ಹೇಯ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ. ಗ್ರಾಮಸ್ಥರ ಮತ್ತು ರೈತರ ಮನಸ್ಸಿಗೆ ನೋವುಂಟುಮಾಡಿರುವ ಇಂತಹ ದುಷ್ಕರ್ಮಿಗಳನ್ನು ತಕ್ಷಣವೇ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಲಾಗುತ್ತದೆ.

ಜನರ ನಂಬಿಕೆಗೆ ಹಾಗೂ ಈ ಊರಿನ ಹೆಸರಿಗೆ ಕಳಂಕ ತರುವಂತಹ ಇಂತಹ ವಿಕೃತ ಕಿಡಿಗೇಡಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು. ಮಾತ್ರವಲ್ಲದೆ ಇಲ್ಲಿನ ಜನರು ಬ್ರಹ್ಮಸ್ಥಾನ, ಬಬ್ಬರ್ಯ, ಪೇಟೆಬೆಟ್ಟು ಕೊರಗಜ್ಜ ಮತ್ತು ಕಟಪಾಡಿ ಕಲ್ಕುಡ ಸೇರಿದಂತೆ ನಾನಾ ಕಡೆ ದೈವ- ದೇವರಲ್ಲಿ ವಿಕೃತಗೊಳಿಸಿದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗುವಂತೆ ಹರಕೆ ಸಲ್ಲಿಸುತ್ತೇವೆ.

ರಮೇಶ್ ಪೂಜಾರಿ, ಮಾಜಿ ಕೋಟೆ ಗ್ರಾಮ ಪಂಚಾಯತ್ ಸದಸ್ಯ ಸ್ವಾರ್ಥವಿಲ್ಲದೆ ಸಮಾಜಕ್ಕಾಗಿ ಶ್ರಮಿಸುವಾಗ, ಕೆಲವರ ವಿಕೃತ ಮನಸ್ಥಿತಿ ನಮ್ಮ ಶ್ರಮವನ್ನು ವ್ಯರ್ಥ ಮಾಡಲು ಯತ್ನಿಸುತ್ತಿರುವುದು ದುರದೃಷ್ಟಕರ. ಇಂತಹ ಅಡ್ಡಿಗಳು ನಮ್ಮ ಮನಸ್ಸಿಗೆ ನೋವುಂಟು ಮಾಡಿವೆ. ಆದರೆ ನೆನಪಿರಲಿ, ಹೃದಯಂ ಫೌಂಡೇಶನ್‌ನ ಸತ್ಕಾರ್ಯಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೃದಯಂ ಫೌಂಡೇಶನ್ ನ ಪ್ರವರ್ತಕ ಸುಭಾಷ್ ಸಾಲಿಯಾನ್ ಹೇಳಿದ್ದಾರೆ.

View this post on Instagram

A post shared by News Karnataka (@newskarnataka)