ಉಡುಪಿ: ಜನರಲ್ಲಿ ಆರ್ಥಿಕ ಸಂಪನ್ಮೂಲವನ್ನು ವೃದ್ಧಿಸುವುದು ಸಹಕಾರಿ ಕ್ಷೇತ್ರದ ಮುಖ್ಯ ಉದ್ದೇಶ ಎಂದು ವಿಧಾನಪರಿಷತ್ತಿನ ಸದಸ್ಯ ಐವನ್ ಡಿಸೋಜಾ ಹೇಳಿದರು.
ಉಡುಪಿ ಶೋಕಾಮಾತ ಇಗರ್ಜಿಯ ಸಭಾಭವನದಲ್ಲಿ ಶುಕ್ರವಾರ ನಡೆದ ಉಡುಪಿ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2024-25ನೇ ಸಾಲಿನ 28ನೇ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗಳು ಹೆಚ್ಚಿನ ಪತ್ರ ವ್ಯವಹಾರ ಇಲ್ಲದೆ, ಸರಳ ರೀತಿಯಲ್ಲಿ ಜನರಿಗೆ ಸಾಲ ನೀಡುತ್ತವೆ. ಆದ್ದರಿಂದ ರಾಜ್ಯದ ಜನರು ಕೂಡ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ವ್ಯವಹಾರ ನಡೆಸುವ ಬದಲು ಸೊಸೈಟಿಗಳಲ್ಲಿ ವ್ಯವಹಾರ ನಡೆಸಿದರೆ ಹೆಚ್ಚು ಲಾಭವಿದೆ ಎಂಬುವುದನ್ನು ಅರಿತುಕೊಂಡಿದ್ದಾರೆ. ನಾವು ಬಯಸಿದ ಸಂದರ್ಭದಲ್ಲಿ ಸೊಸೈಟಿಗೆ ಹೋಗಿ ಹಣ ತಂದು ವ್ಯಾಪಾರ ನಡೆಸಬಹುದು. ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸೊಸೈಟಿಗಳು ಆಧಾರ ಆಗುತ್ತವೆ ಎಂಬುವುದನ್ನು ಕಂಡುಕೊಂಡಿದ್ದಾರೆ ಎಂದರು.
ಸೊಸೈಟಿಗಳು ಹೆಚ್ಚು ಜನಪರವಾಗಿ ಕೆಲಸ ಮಾಡಿದಾಗ ಗ್ರಾಹಕರ ಮುಖದಲ್ಲಿಯೂ ಮಂದಹಾಸ ಮೂಡುತ್ತದೆ. ಆರ್ಥಿಕ ಸಂಪನ್ಮೂಲ ಹೆಚ್ಚಿಸಲು ಹಾಗೂ ಜನರ ಮುಖದಲ್ಲಿ ಸಂತೋಷವನ್ನು ತರುವಲ್ಲಿ ಸಹಕಾರಿ ಕ್ಷೇತ್ರ ಯಶಸ್ವಿಯಾಗಿದೆ. ಕೋ ಆಪರೇಟಿವ್ ಸೊಸೈಟಿಗಳು ಪ್ರಾಮಾಣಿಕತೆಯಿಂದ ಜನಪರವಾಗಿ ಕೆಲಸ ಮಾಡಿದಾಗ ಸಮಾಜ ಬೆಳಗುತ್ತದೆ ಎಂದು ತಿಳಿಸಿದರು.
ಉಡುಪಿ ಶೋಕಾಮಾತ ಇಗರ್ಜಿಯ ಸಹಾಯಕ ಧರ್ಮಗುರು ಲಿಯೋ ಪ್ರವೀಣ್ ಡಿಸೋಜಾ ಆಶೀರ್ವಚನ ನೀಡಿದರು. ಉಡುಪಿ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಲೂಯಿಸ್ ಲೋಬೊ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ಸಾಧಕರನ್ನು ಸನ್ಮಾನಿಸಲಾಯಿತು. ಮನೆ ಕಟ್ಟಲು ಮತ್ತು ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಿಸಲಾಯಿತು. ಎರಡು ವಿದ್ಯಾ ಸಂಸ್ಥೆಗಳಿಗೆ ನೆರವು ನೀಡಲಾಯಿತು. ಸೊಸೈಟಿಯ ಉಪಾಧ್ಯಕ್ಷ ಜೇಮ್ಸ್ ಡಿಸೋಜಾ ಸ್ವಾಗತಿಸಿದರು. ನಿರ್ದೇಶಕ ಮ್ಯಾಕ್ಸಿಮ್ ಡಿಸೋಜಾ ವಂದಿಸಿದರು. ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.

