ಉಡುಪಿ: ಮಣಿಪಾಲ ಮ್ಯಾರಥಾನ್’ನ ಎಂಟನೇ ಆವೃತ್ತಿ ಇದೇ ಫೆ.8ರಂದು ಮಣಿಪಾಲ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆಯಲಿದ್ದು, ಈ ಬಾರಿ ದಾಖಲೆಯ 22,000ಕ್ಕೂ ಅಧಿಕ ಓಟಗಾರರು ವಿದೇಶಗಳಿಂದ ಹಾಗೂ ದೇಶಾದ್ಯಂತದಿಂದ ಭಾಗವಹಿಸಲಿದ್ದಾರೆ ಎಂದು ಆಯೋಜಕರಾದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.

ಮಣಿಪಾಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, 42ಕಿ.ಮೀ.ಗಳ ಫುಲ್ ಮ್ಯಾರಥಾನ್, 21 ಕಿ.ಮೀ.ನ ಹಾಫ್ ಮ್ಯಾರಥಾನ್, 10ಕಿ.ಮೀ, 5ಕಿ.ಮೀ. ಹಾಗೂ ಮೂರು ಕಿ.ಮೀ. ವಿಭಾಗಗಳಲ್ಲಿ ವಿವಿಧ ವಯೋಮಾನದವರಿಗೆ ಸ್ಪರ್ಧೆಗಳು ನಡೆಯಲಿವೆ ಎಂದರು.

ಫೆ.8ರಂದು ಮುಂಜಾನೆ 5:00ಗಂಟೆಗೆ ಕೆಎಂಸಿ ಗ್ರೀನ್ಸ್‌ನಲ್ಲಿ ಫುಲ್ ಮ್ಯಾರಥಾನ್‌ಗೆ ಚಾಲನೆ ನೀಡಲಾ ಗುವುದು ಎಂದ ಅವರು ಹಾಫ್ ಮ್ಯಾರಥಾನ್ ಅಲ್ಲಿಂದಲೇ ಬೆಳಗ್ಗೆ 5:30ಕ್ಕೆ ಪ್ರಾರಂಭಗೊಳ್ಳಲಿದೆ. 6:00ಗಂಟೆಗೆ 10ಕಿ.ಮೀ., 6:20ಕ್ಕೆ 5ಕಿ.ಮೀ. ಹಾಗೂ 7:30ಕ್ಕೆ ಮೂರು ಕಿ.ಮೀ. ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಲಾಗುತ್ತದೆ. ವಿಶೇಷ ಚೇತನರಿಗಾಗಿ ಹಮ್ಮಿಕೊಂಡಿರುವ ಓಟಕ್ಕೆ 8:30ಕ್ಕೆ ಹಸಿರು ನಿಶಾನೆ ತೋರಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಫುಲ್ ಮ್ಯಾರಥಾನ್‌ನಲ್ಲಿ ದುಬಾಯಿ, ಇಂಗ್ಲೆಂಡ್, ಇಥಿಯೋಪಿಯಾ, ಜರ್ಮನಿ, ಜಪಾನ್, ಕಿನ್ಯಾ, ಮಲೇಷಿಯಾ, ನೇಪಾಳ, ಶ್ರೀಲಂಕಾ, ಅಮೆರಿಕ ಸೇರಿದಂತೆ ಇನ್ನೂ ಅನೇಕ ದೇಶಗಳ 100ಕ್ಕೂ ಅಧಿಕ ಮಂದಿ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದರು.

ಮಣಿಪಾಲ ಮ್ಯಾರಥಾನ್‌ನ ವಿಜೇತರಿಗೆ 25ಲಕ್ಷ ರೂ.ಗಳಿಗೂ ಅಧಿಕ ಬಹುಮಾನ ಮೊತ್ತವನ್ನು ನೀಡಲಾಗುತ್ತದೆ. ಫುಲ್ ಮ್ಯಾರಥಾನ್‌ನಲ್ಲಿ ಮೊದಲಿಗರಾಗಿ ಗುರಿತಲುಪುವ ಪುರುಷ ಮತ್ತು ಮಹಿಳಾ ಅಥ್ಲೀಟ್‌ಗೆ ತಲಾ 1,00,000ರೂ. ನಗದು ಬಹುಮಾನವಿರುತ್ತದೆ. ರನ್ನರ್‌ಅಪ್‌ಗೆ ತಲಾ 75,000ರೂ., ತೃತೀಯ ಸ್ಥಾನಿಗೆ 50,000ರೂ.ನಗದು ಬಹುಮಾನ ದೊರೆಯಲಿದೆ ಎಂದು ಮಾಹೆಯ ಕ್ರೀಡಾ ಸಮಿತಿಯ ಕಾರ್ಯದರ್ಶಿ ಡಾ. ವಿನೋದ್ ನಾಯಕ್ ತಿಳಿಸಿದರು.

ಫುಲ್ ಮ್ಯಾರಥಾನ್ ಮಾಹೆ ಗ್ರೀನ್ಸ್‌ನಿಂದ ಪ್ರಾರಂಭಗೊಂಡು ಪೆರಂಪಳ್ಳಿ, ಅಂಬಾಗಿಲು, ಸಂತೆಕಟ್ಟೆ, ಕೆಮ್ಮಣ್ಣು, ಹೂಡೆ, ಮಲ್ಪೆ ಬೀಚ್, ಕಲ್ಮಾಡಿ, ಕಿದಿಯೂರು, ಉದ್ಯಾವರ, ಕಿನ್ನಿಮೂಲ್ಕಿ , ಉಡುಪಿ, ಕಲ್ಸಂಕ ಮಾರ್ಗವಾಗಿ ಮಾಹೆ ತಲುಪಲಿದೆ. 10ಕಿ.ಮೀ. ಓಟವನ್ನು ವಿಶೇಷವಾಗಿ ಕೊಳಲಗಿರಿ ಹಾವಂಜೆ ಬಳಿ ನಿರ್ಮಿಸಿರುವ ಮಣಿಪಾಲ ಹಾಸ್ಪಿಸ್ ಆ್ಯಂಡ್ ರಿಸ್ಪೈಟ್ ಕೇಂದ್ರದ ಮೂಲಕ ಓಡಿಸಲಾಗುವುದು ಎಂದು ಡಾ.ಶರತ್‌ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಯಶಪಾಲ್ ಸುವರ್ಣ, ಮಾಹೆಯ ಅಧಿಕಾರಿಗಳಾದ ಡಾ.ನಾರಾಯಣ ಸಭಾಹಿತ್, ಡಾ.ಗಿರಿಧರ್ ಕಿಣಿ ಮುಂತಾದವರು ಉಪಸ್ಥಿತರಿದ್ದರು.