ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ–2026ರ ಅಂಗವಾಗಿ ಕೈಗೊಳ್ಳಲಾಗಿರುವ ವಿದ್ಯುತ್‌ ದೀಪಾಲಂಕಾರ ಕಣ್ಮನ ಸೆಳೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳಲ್ಲಿ ಸುಮಾರು 11 ಕಿ.ಮೀ. ಉದ್ದಕ್ಕೂ ಅಳವಡಿಸಿರುವ ಆಕರ್ಷಕ ದೀಪಗಳ ಬೆಳಕಿನಲ್ಲಿ ಕರಾವಳಿಯ ದಸರಾ ಸಂಭ್ರಮ ಮತ್ತಷ್ಟು ಕಳೆಗಟ್ಟಿದೆ.

ಉಚ್ಚಿಲದಿಂದ ಪಡುಬಿದ್ರಿಯವರೆಗೆ, ಅಲ್ಲಿಂದ ಕಾಪು ಜಂಕ್ಷನ್‌ವರೆಗೆ ಹಾಗೂ ಕೊಪ್ಪಲಂಗಡಿಯಿಂದ ಕಾಪು ಬೀಚ್‌ವರೆಗೆ ರಸ್ತೆಯುದ್ದಕ್ಕೂ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ರಾತ್ರಿಯಾಗುತ್ತಿದ್ದಂತೆ ಬೆಳಕಿನ ವೈಭವದಿಂದ ಕಂಗೊಳಿಸುವ ಹೆದ್ದಾರಿ, ದಸರಾ ಉತ್ಸವದ ಆಕರ್ಷಣೆಯನ್ನು ಹೆಚ್ಚಿಸಿದೆ. ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಗಮನ ಸೆಳೆಯುತ್ತಿರುವ ದೀಪಾಲಂಕಾರವು ಉಚ್ಚಿಲ ದಸರಾ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿದೆ.

ವಿದ್ಯುದ್ದೀಪಾಲಂಕಾರಕ್ಕೆ ಉಡುಪಿ-ಉಚ್ಚಿಲ ದಸರಾ ರೂವಾರಿ ಜಿ.ಶಂಕರ್ ಚಾಲನೆ ನೀಡಿದರು. ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಪೂಜಾ ವಿಧಿ ನೆರವೇರಿಸಿದರು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್‌ ಸುವರ್ಣ, ದ.ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ,

ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಪ್ರಮುಖರಾದ ವಾಸುದೇವ ಸಾಲ್ಯಾನ್, ಗುಂಡು ಬಿ. ಅಮೀನ್, ಮೋಹನ್ ಬೇಂಗ್ರೆ, ಶರಣ್ ಕುಮಾರ್ ಮಟ್ಟು, ರತ್ನಾಕರ ಸಾಲ್ಯಾನ್, ಸುಜಿತ್ ಸಾಲ್ಯಾನ್, ರವೀಶ್‌ ಕೊರವಡಿ, ಸತೀಶ್ ಕುಂದ‌ರ್ ಮಲ್ಪೆ, ಹರಿಯಪ್ಪ ಕೋಟ್ಯಾನ್, ಕವಿತಾ ಶರತ್, ಮನೋಜ್ ಕಾಂಚನ್, ಸುಗುಣಾ ಕರ್ಕೇರ, ಸತೀಶ್ ಅಮೀನ್ ಬಾರ್ಕೂರು, ಉದಯಕುಮಾ‌ರ್ ಹಟ್ಟಿಯಂಗಡಿ, ಶ್ರೀಪತಿ ಭಟ್ ಉಚ್ಚಿಲ, ವ್ಯವಸ್ಥಾಪಕ ಸತೀಶ್‌ ಅಮೀನ್ ಪಡುಕೆರೆ ಮತ್ತಿತರರು ಉಪಸ್ಥಿತರಿದ್ದರು.

View this post on Instagram

A post shared by News Karnataka (@newskarnataka)