ಉಡುಪಿ: ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿ ಮಾಲಕತ್ವದ ಬಿಆರ್‌ಎಸ್ ಲೈಫ್ ಗ್ರೂಪ್ ದುಬೈ ಶೈಲಿಯಲ್ಲಿ ನಿರ್ಮಿಸಿದ್ದ ಆರು ಮಹಡಿಯ ಸರ್ವಸುಸಜ್ಜಿತ ಉಡುಪಿ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ನಿರ್ವಹಣೆ ಇದೀಗ ಸರಕಾರಕ್ಕೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಸರಕಾರಕ್ಕೆ ಹಸ್ತಾಂತರಿಸಿದ ಬಳಿಕ ಈ ಆಸ್ಪತ್ರೆಯ ಕಟ್ಟಡ ಸರಿಯಾದ ನಿರ್ವಹಣೆ ಇಲ್ಲದೇ ಸೊರಗುತ್ತಿದೆ. ಪ್ರತೀ ವರ್ಷ ಇದರ ನಿರ್ವಹಣೆಗೆ 60 ಲಕ್ಷ ರೂ. ಅನುದಾನ ಮೀಸಲಿರಿಸಬೇಕಾಗಿದೆ.

ರಾಜ್ಯ ಸರಕಾರದೊಂದಿಗಿನ ಒಪ್ಪಂದದಂತೆ ಬಿಆರ್‌ಎಸ್ ಲೈಫ್ ಗ್ರೂಪ್ 200 ಬೆಡ್‌ ಗಳ ಆರು ಮಹಡಿಗಳ ಕಟ್ಟ ಡವನ್ನು 2016ರಲ್ಲಿ ನಿರ್ಮಿಸಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮುನ್ನಡೆಸುತ್ತಿತ್ತು. ಕೆಲವೊಂದು ಸಮಸ್ಯೆಯಿಂದ ಬಿಆರ್‌ಎಸ್ ಲೈಫ್ ಗ್ರೂಪ್‌ಗೆ ಆಸ್ಪತ್ರೆಯನ್ನು ಮುನ್ನಡೆಸಲು ಸಾಧ್ಯವಾಗದ ಕಾರಣ 2022ರಲ್ಲಿ ಸರಕಾರ ಅದನ್ನು ಸ್ವಾಧೀನಕ್ಕೆ ಪಡೆದು ಕೊಂಡಿತ್ತು. ಇದೀಗ ಆರೋಗ್ಯ ಇಲಾಖೆ ಈ ಆಸ್ಪತ್ರೆ ಹಾಗೂ ಕಟ್ಟಡವನ್ನು ನಿರ್ವಹಿಸುತ್ತಿದೆ.

ಸದ್ಯ ಸರಕಾರ ಈ ಆಸ್ಪತ್ರೆಯನ್ನು 200 ಬೆಡ್‌ಗಳ ಬದಲು 70ಕ್ಕೆ ಸೀಮಿತಗೊಳಿಸಿ ಸೇವೆ ನೀಡುತ್ತಿದೆ. ಅದಕ್ಕೆ ಅಗತ್ಯವಿರುವ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಈ ಆಸ್ಪತ್ರೆಯಲ್ಲಿ ತಿಂಗಳಿಗೆ 160 ಹೆರಿಗೆ ಆಗುತ್ತಿದ್ದು, ಪ್ರತಿದಿನ 80 ಮಂದಿ ಒಳರೋಗಿಗಳಾಗಿ ದಾಖಲಾಗುತ್ತಿದ್ದಾರೆ ಎಂದು ಜಿಲ್ಲಾ ಸರ್ಜನ್ ಡಾ.ಅಶೋಕ್ ತಿಳಿಸಿದ್ದಾರೆ.

ದುಬೈ ಮಾದರಿಯಲ್ಲಿ ಈ ಕಟ್ಟಡವನ್ನು ಕೇವಲ ಪಿಲ್ಲರ್‌ಗಳಿಂದ ನಿರ್ಮಿಸಿ, ಆರು ಮಹಡಿಯ ಗೋಡೆಗಳನ್ನೂ ಇಟ್ಟಿಗೆ, ಕಲ್ಲುಗಳ ಬದಲು ಜಿಪ್ಸಮ್ ಶೀಟ್‌ಗಳ ಮೂಲಕ ರಚಿಸಲಾಗಿದೆ. ಇಲ್ಲಿನ ಜನರೇಟರ್, ಎಸಿ, ಸಿಸಿಟಿವಿ ಕ್ಯಾಮರಾ, ಲಿಫ್ಟ್, ಟ್ರಾನ್ಸ್‌ಫಾರ್ಮ‌ರ್, ಎಕ್ಸರೇ ಮೆಷಿನ್ ಸೇರಿದಂತೆ ಎಲ್ಲ ಉಪಕರಣಗಳು ವಿದೇಶದ್ದಾಗಿದ್ದು, ಬಹಳಷ್ಟು ದುಬಾರಿಯಾಗಿದೆ.

ಕರಾವಳಿಯ ಭಾರೀ ಮಳೆಗೆ ಈ ಕಟ್ಟಡದ ಗೋಡೆಯ ಜಿಪ್ಸಮ್ ಶೀಟುಗಳು ಒದ್ದೆಯಾಗಿ ಸೋರಿಕೆಯಾಗುತ್ತಿದೆ ಮತ್ತು ಹಲವು ಕಡೆ ಕಿತ್ತು ಹೋಗಿವೆ. ಐದನೇ ಮಹಡಿಯಲ್ಲಿರುವ ಬಾಣಂತಿ ಮತ್ತು ಮಗುವನ್ನು ಇರಿಸುವ ಕೋಣೆಯ ಗೋಡೆಗಳು ಕಿತ್ತುಹೋಗಿ ಅಪಾಯವನ್ನು ಸೂಚಿಸುತ್ತಿದೆ. ಅದೇ ರೀತಿ ಪ್ರಸವಪೂರ್ವ ಕೋಣೆಗಳ ಗೋಡೆಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಮೇಲ್ಛಾವಣಿಗೆ ಆಳವಡಿಸಿರುವ ಪಿಒಪಿ ಕೂಡ ಕಿತ್ತು ಹೋಗಿ ರೋಗಿಗಳ ತಲೆಗೆ ಬೀಳುವ ಸ್ಥಿತಿಯಲ್ಲಿದೆ. ಮೊದಲ ಮಹಡಿಯಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯ ಕೇಂದ್ರವಾಗಿ ಪರಿಣಮಿಸಿದೆ. ಅದೇರೀತಿ ತ್ಯಾಜ್ಯ ರಾಶಿಯನ್ನು ಇಲ್ಲಿ ಹಾಕಲಾಗುತ್ತಿದೆ. ಐದನೇ ಮಹಡಿಯಲ್ಲಿರುವ ಬಾಣಂತಿಯರ ಕೋಣೆಯಲ್ಲಿ ಇಲಿ, ಜಿರಳೆ, ಸೊಳ್ಳೆ ಕಾಟಗಳು ಅಧಿಕವಾಗಿವೆ. ಇದರಿಂದ ಬಾಣಂತಿಯರು ಹಾಗೂ ಮಕ್ಕಳು ತೀರಾ ತೊಂದರೆ ಅನುಭವಿಸುತ್ತಿದ್ದಾರೆಂದು ಉದ್ಯಾವರದ ಪ್ರಶಾಂತ್ ಎಂಬವರು ದೂರಿದ್ದಾರೆ.

ಈ ಕಟ್ಟಡದಲ್ಲಿ ಒಟ್ಟು ನಾಲ್ಕು ಲಿಫ್ಟ್ ಗಳನ್ನು ಅಳವಡಿಸಲಾಗಿದೆ. ಅವೆಲ್ಲವೂ ವಿದೇಶಿ ತಂತ್ರಜ್ಞಾನದ ಲಿಫ್ಟ್‌ಗೆ ಳಾಗಿದ್ದು, ನಿರ್ವಹಣೆಗೆ ತಿಂಗಳಿಗೆ ತಲಾ ಐದು ಸಾವಿರ ರೂ.ನಂತೆ ಒಟ್ಟು 20 ಸಾವಿರ ರೂ. ಬೇಕಾಗಿದೆ. ಇದರಲ್ಲಿ ಎರಡು ಲಿಫ್ಟ್ಗಳು ಈಗಾಗಲೇ ಕೈಕೊಟ್ಟಿದ್ದು, ಅವುಗಳ ದುರಸ್ತಿಗೆ 80 ಸಾವಿರ ರೂ.ವರೆಗೆ ಬೇಕಾಗುತ್ತದೆ ಎನ್ನುತ್ತಾರೆ ಆಸ್ಪತ್ರೆಯ ಕಟ್ಟಡ ನಿರ್ವಹಣಾ ಇಂಜಿನಿಯರ್ ಪ್ರಕಾಶ್ ಎಸ್.
ಇಲ್ಲಿ ಅಳವಡಿಸಲಾದ ವಿದೇಶಿ ತಂತ್ರಜ್ಞಾನದ ಟ್ರಾನ್ಸ್‌ ಫಾರ್ಮರ್ ಇದೀಗ ಹಾಳಾಗಿದ್ದು, ಅದರ ದುರಸ್ತಿಗೆ ತಂತ್ರಜ್ಞರನ್ನು ಕೇರಳದಿಂದ ಕರೆ ತರಬೇಕಾಗಿದೆ. ಅವರಿಗೆ ಒಮ್ಮೆಗೆ ಒಂದು ಲಕ್ಷ ರೂ. ಪಾವತಿಸಬೇಕು. ಇದನ್ನು ಸ್ಥಳೀಯವಾಗಿ ದುರಸ್ತಿಪಡಿಸಲು ಸಾಧ್ಯವಾಗುತ್ತಿಲ್ಲ. ಇದರ ಬಿಡಿ ಭಾಗಗಳು ಕೂಡ ತುಂಬಾ ದುಬಾರಿಯಾಗಿವೆ ಎಂದು ಅವರು ತಿಳಿಸಿದರು.

ಇಲ್ಲಿ 600 ಕೆವಿ ಸಾಮರ್ಥ್ಯದ ಜನರೇಟರ್‌ಳಿದ್ದು, ವಿದ್ಯುತ್ ಕೈಕೊಟ್ಟಾ ಗ ಈ ಜನರೇಟರ್ ಚಾಲನೆ ಮಾಡಬೇಕಾಗುತ್ತದೆ. ಇದಕ್ಕೆ ಒಂದು ಗಂಟೆಗೆ 50 ಲೀಟರ್ ಡೀಸೆಲ್ ಬೇಕು. ಪ್ರತೀ ಮಂಗಳವಾರ ಸುಮಾರು 8 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಆಗುತ್ತಿದ್ದು, ದಿನಕ್ಕೆ 30 ಸಾವಿರ ರೂ. ಮೊತ್ತದ ಡೀಸೆಲ್ ಬೇಕಾಗುತ್ತದೆ. ಹೀಗೆ ವಾರಕ್ಕೆ ಸರಾಸರಿ 40 ಸಾವಿರ ರೂ. ಡೀಸೆಲ್ ಬಳಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ವಿದೇಶಿ ಮಾದರಿಯಲ್ಲಿ ಈ ಆಸ್ಪತ್ರೆ ಕಟ್ಟಡ ನಿರ್ಮಿಸಿರುವುದಲ್ಲದೆ, ವಿದೇಶಿ ತಂತ್ರಜ್ಞಾನದ ಉಪಕರಣಗಳನ್ನೇ ಇಲ್ಲಿ ಅಳವಡಿಸಲಾಗಿದೆ. ಹಾಗಾಗಿ ಇದರ ನಿರ್ವಹಣೆ ತುಂಬಾ ದುಬಾರಿಯಾಗಿದೆ. ವರ್ಷಕ್ಕೆ ಕಟ್ಟಡ ನಿರ್ವಹಣೆ ಹಾಗೂ ಉಪಕರಣಗಳ ದುರಸ್ತಿಗೆ 60 ಲಕ್ಷ ರೂ. ಅನುದಾನ ಬೇಕಾಗಿದೆ. ಈ ಸಂಬಂಧ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಜನ ಇಲ್ಲಿಯ ಕೊರತೆ ಹಾಗೂ ಕಷ್ಟಗಳನ್ನು ಹೇಳುತ್ತಾರೆ. ಆದರೆ ನಮಗೆ ಈ ಕಟ್ಟಡವನ್ನು ನಿರ್ವಹಣೆ ಮಾಡಲು ಆಗುತ್ತಿಲ್ಲ ಎಂಬುದು ಅವರಿಗೆ ಅರ್ಥ ಆಗುತ್ತಿಲ್ಲ. ವಿದೇಶಿ ಮಾದರಿಯ ಕಟ್ಟಡದ ರಚನೆಯಿಂದಲೇ ನಮಗೆ ಸಮಸ್ಯೆ ಆಗುತ್ತಿದೆ.

ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಜಿಲ್ಲಾ ಸರ್ಜನ್ ರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ತಿಳಿದುಕೊಂಡಿದ್ದೇನೆ. ಇದರ ನಿರ್ವಹಣೆ ತುಂಬಾ ಕಷ್ಟ ಆಗುತ್ತಿರುವುದರಿಂದ ಜನರಿಗೆ ಸರಿಯಾದ ಸೇವೆ ಸಿಗುತ್ತಿಲ್ಲ. ಆ ನಿಟ್ಟಿನಲ್ಲಿ ಮುಂದೆ ಬರುವ ನೂತನ ಆರೋಗ್ಯ ಸಚಿವರು ಹಾಗೂ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ನಿರ್ವಹಣೆಗೆ ಅನುದಾನ ಒದಗಿಸುವಂತೆ ಮನವಿ ಮಾಡಲಾಗುವುದು.