ಉಡುಪಿ: ಪ್ರಥಮ ಬಾರಿಗೆ ಕೃಷ್ಣಪೂಜಾ ದೀಕ್ಷೆ ಪಡೆದು ಪರ್ಯಾಯ ಸ್ವೀಕರಿಸಿದ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಭಾನುವಾರ ಸರ್ವಜ್ಞಪೀಠಾರೋಹಣ ಮಾಡಿದರು.

ಶ್ರೀಪಾದರು ತಮ್ಮ ಮಠದ ಉಪಾಸ್ಯದೇವರಾದ ರುಕ್ಕಿಣಿ ಸತ್ಯಭಾಮಾ ಸಹಿತ ಶ್ರೀ ವಿಠಲ ದೇವರೊಂದಿಗೆ ಉಡುಪಿ ಜೋಡುಕಟ್ಟೆಗೆ ಆಗಮಿಸಿದ್ದು, ಸಾಲಂಕೃತ ಪಲ್ಲಕಿಯಲ್ಲಿ ಅಷ್ಟಮಠಗಳ ಇತರ ಯತಿಗಳೊಡಗೂಡಿ ವೈಭವದ ಮೆರವಣಿಗೆಯಲ್ಲಿ ರಥಬೀದಿಗೆ ಆಗಮಿಸಿದರು.

ಕನಕನ ಕಿಂಡಿ ಮೂಲಕ ಶ್ರೀಕೃಷ್ಣನ ದೂಳಿದರ್ಶನ ಮಾಡಿ, ಚಂದ್ರಮೌಳೇಶ್ವರ- ಅನಂತೇಶ್ವರ ದೇವಳಕ್ಕೆ ತೆರಳಿ ದೇವರ ದರ್ಶನ ಪಡೆದರು. ಬಳಿಕ ಕೃಷ್ಣಮಠಕ್ಕೆ ಚಿತ್ತೈಸಿದಾಗ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಸ್ತಲಾಘವದೊಂದಿಗೆ ಶೀರೂರು ಶ್ರೀಗಳನ್ನು ಬರಮಾಡಿಕೊಂಡು ನವಗ್ರಹ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿಸಿದರು.

ಚಂದ್ರಶಾಲೆಯಲ್ಲಿ ಗಂದಾದ್ಯುಪಚಾರ ನಡೆಸಿ, ಮಠೀಯ ಗೌರವ ಸಲ್ಲಿಸಿ, ಗರ್ಭಗುಡಿಯ ದ್ವಾರದ ಬಳಿಯಿರುವ ಆಚಾರ್ಯ ಮಧ್ವರ ಗುಡಿ ಸಮ್ಮುಖದಲ್ಲಿ ಅಕ್ಷಯ ಪಾತ್ರೆ ಮತ್ತು ಸಟ್ಟುಗ ಹಾಗೂ ಗರ್ಭಗುಡಿಯ ಕೀಲಿಕೈ ಹಸ್ತಾಂತರಿಸಿದರು. ಬಳಿಕ ಸರ್ವಜ್ಞಪೀಠದಲ್ಲಿ ಕುಳ್ಳಿರಿಸಿ, ಮುಂದಿನ ದೈವಾರ್ಷಿಕ ಶ್ರೀಕೃಷ್ಣ ಪೂಜಾಧಿಕಾರವನ್ನು ಹಸ್ತಾಂತರಿಸಿದರು. ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.

ಶ್ರೀಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ, ಮೈಸೂರು ರಾಜವಶಂಸ್ಥ ಯದುವೀರ ಕೃಷ್ಣದತ್ತ ಒಡೆಯ‌ರ್ ಮೊದಲಾದವರಿದ್ದರು.