ಉಡುಪಿ: ದೇವಾಲಯಗಳು ದೇವರ ಅಸ್ತಿತ್ವದ ಪವಿತ್ರ ಸ್ಥಳವಾಗಿದ್ದು ಇದರ ಪಾವಿತ್ರ್ಯತೆಯನ್ನು ಪ್ರತಿಯೊಬ್ಬರೂ ಕಾಪಾಡಬೇಕು ಎಂದು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ತೊಟ್ಟಂ ಸಂತ ಅನ್ನಮ್ಮನವರ ಚಾಪೆಲ್ ಉದ್ಘಾಟಿಸಿ ಆಶೀರ್ವಚನ ನೆರವೇರಿಸಿ ಪವಿತ್ರ ಬಲಿಪೂಜೆಯಲ್ಲಿ ಸಂದೇಶ ನೀಡಿದರು. ದೇವಾಲಯಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ಅತೀ ವಿಶೇಷವಾದ ಮಹತ್ವವಿದ್ದು ದೇವರಿಗೆ ಸ್ತುತಿ ಮತ್ತು ಆರಾಧನೆ ಸಲ್ಲಿಸಲು ದೇವಾಲಯ ಸಹಕಾರಿಯಾಗುತ್ತದೆ. ಕಟ್ಟಡಗಳಿಗಿಂತಲೂ ನಮಗೆ ಅತ್ಯಾವಶ್ಯಕವಾದುದು ಆಂತರಿಕ ನಂಬಿಕೆ, ದೇವರಿಗಿರುವ ಗೌರವ ಮತ್ತು ಬಡವರನ್ನು ಗೌರವಿಸುವ ಜೀವನ ಶೈಲಿ. ಒಳಗಿನ ಭಕ್ತಿ ಇಲ್ಲದ ಹೊರಗಿನ ಆಚರಣೆಗಳಿಗೆ ಯಾವುದೇ ಅರ್ಥವಿಲ್ಲ.

ಈ ದೇವಾಲಯವು ಪ್ರಾರ್ಥನೆಗೆ, ದೈವಿಕ ಅನುಭವಕ್ಕೆ ಮತ್ತು ಪರಮಾತ್ಮನೊಂದಿಗೆ ಸಂಪರ್ಕ ಸಾಧಿಸಲು ಒಂದು ಪವಿತ್ರ ಸ್ಥಳವಾಗಿರುತ್ತದೆ. ಕಲ್ಲಿನಿಂದ ನಿರ್ಮಿತ ಕಟ್ಟಡಗಳು ನಾಶವಾಗಬಹುದು; ಆದರೆ ನಮ್ಮೊಳಗಿನ ಜೀವಂತ ದೇವಾಲಯ ಸದಾಕಾಲ ಉಳಿಯುತ್ತದೆ ಎಂದರು.

ಬಲಿಪೂಜೆಯ ಬಳಿಕ ಜಪಸರ ಪ್ರಾರ್ಥನೆ ನಡೆದು ತದನಂತರ ಕಿರು ದೇವಾಲಯದಿಂದ ಮುಖ್ಯ ದೇವಾಲಯದ ವರೆಗೆ ಮೇಣದ ಬತ್ತಿಗಳನ್ನು ಹಿಡಿದು ಮೆರವಣಿಗೆ ನಡೆಯಿತು. ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮದ ನಿರ್ವಹಣೆಯನ್ನು ವಂ|ವಿಲ್ಸನ್ ಡಿಸೋಜಾ ನೆರವೇರಿಸಿದರು.

ಮುಖ್ಯ ದೇವಾಲಯದ ತೆರೆದ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಚಾಪೆಲ್ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಿಗೆ , ಆರ್ಕಿಟೆಕ್ಚರ್ ಹಾಗೂ ಸಹಕರಿಸಿದವರಿಗೆ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಚರ್ಚಿನ ಪ್ರಧಾನ ಧರ್ಮಗುರು ವಂ|ಡೆನಿಸ್ ಡೆಸಾ ಅವರನ್ನು ಚರ್ಚಿನ ಪರವಾಗಿ ಗೌರವಿಸಲಾಯಿತು.

ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಧರ್ಮಪ್ರಾಂತ್ಯದ ಕುಲಪತಿಗಳಾದ ವಂ| ಸ್ಟೀಫನ್ ಡಿಸೋಜಾ, ಮಾಜಿ ಶಾಸಕರಾದ ಜೆ ಆರ್ ಲೋಬೊ, ರಘುಪತಿ ಭಟ್, ಕಾನ್ವೆಂಟಿನ ಸುಪಿರೀಯರ್ ಸಿಸ್ಟರ್ ಸುಷ್ಮಾ, ಕ್ರೈಸ್ತ ಅಭಿವೃದ್ದಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್ಮ ಸಮನ್ವಯ ಸರ್ವ ಧರ್ಮ ಸಮಿತಿ ಅಧ್ಯಕ್ಷರಾದ ರಮೇಶ್ ತಿಂಗಳಾಯ ಎಮ್ ಸಿಸಿ ಬ್ಯಾಂಕ್ ಅಧ್ಯಕ್ಷರಾದ ಅನಿಲ್ ಲೋಬೊ, ಪ್ರಮುಖ ದಾನಿ ಓಸ್ವಲ್ಡ್ ವಾಸ್, ಪೀಟರ್ ಆಂಡ್ರೂ ಡಿಸೋಜಾ, ಚರ್ಚ್ ಪಾಲನಾ ಸಮಿತಿಯ 20 ಆಯೋಗಗಳ ಸಂಚಾಲಕರಾದ ಶಾಂತಿ ಫೆರ್ನಾಂಡಿಸ್, ವಾಜ್ ಕುಟುಂಬದ ಪರವಾಗಿ ಕ್ಲಿಫರ್ಡ್ ಲೀನಾ ವಾಜ್ ಮತ್ತು ಕುಟುಂಬದವರು ಹಾಗೂ ಇತರರು ಉಪಸ್ಥೀತರಿದ್ದರು.

ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಸ್ವಾಗತಿಸಿ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಲವೀನಾ ಫೆರ್ನಾಂಡಿಸ್ ವಂದಿಸಿದರು. ಉಪಾಧ್ಯಕ್ಷರಾದ ಲೆಸ್ಲಿ ಆರೋಝಾ ಕಾರ್ಯಕ್ರಮ ನಿರೂಪಿಸಿದರು.