ಉಡುಪಿ: ಉಡುಪಿ ನಗರಸಭೆಯ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ನದಿಗಳಿಗೆ ಕೊಳಚೆ ನೀರು ಬಿಡುವ ವಸತಿ ಸಮುಚ್ಚಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಿರ್ಣಯ ಮಾಡಲಾಯಿತು.

ಸದಸ್ಯ ವಿಜಯ ಕೊಡವೂರು ಮಾತನಾಡಿ, ನಗರ ವ್ಯಾಪ್ತಿಯಲ್ಲಿರುವ ವಸತಿ ಸಮುಚ್ಚಯಗಳು ಎಸ್ ಟಿಪಿ ಪಾಲನೆ ಮಾಡದೆ ನೇರವಾಗಿ ಇಂದ್ರಾಣಿ ನದಿ ಹಾಗೂ ಸ್ವರ್ಣ ನದಿಗಳಿಗೆ ಕೊಳಚೆ ನೀರು ಬಿಡುತ್ತಿರುವ ತುಂಬಾ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಯಾವ ರೀತಿಯ ಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪ್ರಕಾಶ್ ಪ್ರಭು ಅವರು, ಈಗಾಗಲೇ 187 ವಸತಿ ಸಮುಚ್ಚಯಗಳಿಗೆ ನೋಟಿಸ್ ಕೊಟ್ಟಿದ್ದೇವೆ. ಕೆಲವು ವಸತಿ ಸಮುಚ್ಚಯಗಳ ಪಂಪ್ ಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯಶ್ ಪಾಲ್ ಸುವರ್ಣ ಅವರು, ಕೊಳಚೆ ನೀರನ್ನು ನೇರವಾಗಿ ನದಿಗಳಿಗೆ ಬಿಡುವ ವಸತಿ ಸಮುಚ್ಚಯಗಳ ಲೈಸನ್ಸ್ ರದ್ದುಗೊಳಿಸಬೇಕು ಹಾಗೂ ವಿದ್ಯುತ್ ಸಂಪರ್ಕ ಕಡಿಗೊಳಿಸುವ ಕಾರ್ಯ ಮಾಡಬೇಕು.

ಕೇವಲ ನೋಟಿಸ್ ನೀಡುವುದರಿಂದ ಯಾವುದೇ ಪ್ರಯೋಜನ ಆಗಲ್ಲ ಎಂದರು. ಇದಕ್ಕೆ ಸದಸ್ಯರೆಲ್ಲರೂ ಧ್ವನಿಗೂಡಿಸಿ ನೋಟಿಸ್ ನೀಡುವ ಬದಲು ನೇರವಾಗಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸದಸ್ಯ ಮಂಜುನಾಥ್ ಮಣಿಪಾಲ್ ಮಾತನಾಡಿ, ಇದಕ್ಕೆ ರ‌್ಯಾಪಿಡ್ ಪೋರ್ಸ್ ಅನ್ನು ರಚಿಸಿ ಎಲ್ಲ ಕಟ್ಟಡಗಳನ್ನು ಪರಿಶೀಲನೆ ಮಾಡಿ ಎಸ್ ಟಿಪಿ ಅಳವಡಿಸಿದ್ದಾರೆ, ಇಲ್ಲವೋ ಎಂದು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.

ಸದಸ್ಯೆ ಜಯಂತಿ ಮಾತನಾಡಿ, ಸುಬ್ರಹ್ಮಣ್ಯ ವಾರ್ಡ್ ನಲ್ಲಿ ಫ್ಲ್ಯಾಟ್ ವೊಂದರ ಶೌಚಾಲಯದ ಗುಂಡಿಯ ಕೊಳಚೆ ನೀರನ್ನು ನೇರವಾಗಿ ಚರಂಡಿ ಬಿಡುತ್ತಿದ್ದು, ಇದರಿಂದ ಸುತ್ತಮುತ್ತಲಿನ 76 ಮನೆಗಳಿಗೆ ನೀರುಣಿಸುವ ಬಾವಿಯ ನೀರು ಕಲುಷಿತಗೊಂಡಿದೆ. ರೋಗ ಹರಡುವ ಭೀತಿ ಆವರಿಸಿದೆ. ಆದ್ದರಿಂದ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು. ಮುಂದೆ ಇಲ್ಲಿ‌ ಏನಾದ್ರೂ ಅನಾಹುತ ಆದ್ರೆ ಅದಕ್ಕೆ ನಗರಸಭೆಯೇ ನೇರ ಹೊಣೆ ಆಗಲಿದೆ . ಹಾಗಾಗಿ ಈ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಪಿಟ್ ಬದಲಾವಣೆ ಮಾಡುವಂತೆ ಕಟ್ಟಡದ ಮಾಲೀಕರಿಗೆ ಸೂಚನೆ ನೀಡಬೇಕು. ಇಲ್ಲದಿದ್ದರೆ ಮುಂದೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್ ಮಾತನಾಡಿ, ನಗರದ ಮೀನು ಮಾರುಕಟ್ಟೆಯಲ್ಲಿ ಮೀನು ಶುಚಿಗೊಳಿಸುವ ಕೊಠಡಿಯಲ್ಲಿ ಲೈಟ್ ವ್ಯವಸ್ಥೆ ಇಲ್ಲದೆ, ಮೀನುಗಾರ ಮಹಿಳೆಯರು ಮೊಬೈಲ್ ಟಾರ್ಚ್ ಲೈಟ್ ನಲ್ಲಿ ಮೀನು ಶುಚಿಗೊಳಿಸುತ್ತಿದ್ದಾರೆ. ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳಬೇಕು. ನಗರಸಭೆಯ ಪ್ರಮುಖ ಜಂಕ್ಷನ್ ಗಳಲ್ಲಿ ಹಾಕಲಾಗಿರುವ ಸಿಗ್ನಲ್ ಲೈಟ್ ಕಂಬಗಳನ್ನು ಕೂಡಲೇ ತೆರವುಗೊಳಿಸಬೇಕು. ನಗರದ ಪ್ರಮುಖ ಜಂಕ್ಷನ್, ರಸ್ತೆಗಳಲ್ಲಿ ಸಿಸಿ ಕ್ಯಾಮರಾಗಳನ್ನು‌ ಅಳವಡಿಸಬೇಕು ಎಂದು ಒತ್ತಾಯಿಸಿದರು.