ಉಡುಪಿ: ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಜಾರಿಯಲ್ಲಿದ್ದರೂ ಬಹುತೇಕ ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ದಾಖಲಾಗಿಲ್ಲ. ಆದರೆ ಕರಾವಳಿ ಭಾಗದಲ್ಲಿ ಬಿರುಗಾಳಿಯ ವೇಗ ಹೆಚ್ಚಾಗಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ತೀವ್ರಗೊಂಡಿದೆ.
ಹವಾಮಾನ ಇಲಾಖೆ ಜುಲೈ ಎರಡನೇ ವಾರದಲ್ಲಿ ಮಳೆಯೊಂದಿಗೆ ಗಾಳಿಯ ವೇಗವೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಪ್ರಸ್ತುತ ಮಳೆ ಕಡಿಮೆಯಾಗಿದ್ದರೂ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಕರಾವಳಿ ಭಾಗದ ನಿವಾಸಿಗಳು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಗಾಳಿಯ ತೀವ್ರತೆ ಹೆಚ್ಚಿದಂತೆ ಸಮುದ್ರದಲ್ಲಿ ಅಲೆಗಳ ಎತ್ತರಗ ಮತ್ತು ಆರ್ಭಟವೂ ಹೆಚ್ಚಾಗುತ್ತಿದ್ದು, ಯಾವುದೇ ರೀತಿಯ ಮೀನುಗಾರಿಕಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿಲ್ಲ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಸೂಚಿಸಲಾಗಿದೆ.
ಇದೇ ವೇಳೆ ಪ್ರವಾಸಿಗರು ಕಡಲತೀರಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸಮುದ್ರದ ಅಲೆಗಳ ಬಳಿ ಹೋಗುವುದು, ಸೆಲ್ಫಿ ತೆಗೆಯುವುದು ಅಥವಾ ಹುಚ್ಚಾಟ ನಡೆಸುವುದು ಅಪಾಯಕಾರಿಯಾಗಿರುವುದರಿಂದ ಅಂತಹ ಸಾಹಸಗಳಿಂದ ದೂರವಿರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

