ಉಡುಪಿ: ಕಾಪು ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನವನ್ನು ಕ್ಷೇತ್ರಕ್ಕೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕಾಪು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ  ಉದ್ಯಾವರ ಹಾಗೂ ಶಿರ್ವ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಸವಲತ್ತು ವಿತರಣಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರ ಒತ್ತಡದ ಫಲವಾಗಿ ವಿವಿಧ ಕಾಮಗಾರಿಗಳಿಗೆ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ, ಇನ್ನೂ 26 ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಿರ್ವ ಗ್ರಾಮ ಪಂಚಾಯತಿ ಮೇಲ್ದರ್ಜೆಗೆ 

ಶಿರ್ವ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಲಾಗುವುದು. ಪಟ್ಟಣ ಪಂಚಾಯತಿಯಾಗಲು ಶಿರ್ವ ಗ್ರಾಮ ಪಂಚಾಯತಿ ಎಲ್ಲಾ ರೀತಿಯಲ್ಲಿ ಅರ್ಹತೆ ಹೊಂದಿದೆ. ಜಿಲ್ಲಾ ಹಾಗೂ ತಾಲೂಕು ಪಂಚಾಯತ್  ಚುನಾವಣೆಗಳು ಡಿಸೆಂಬರ್ ತಿಂಗಳಲ್ಲಿ ನಡೆಯದಿದ್ದರೆ ಶಿರ್ವ ಗ್ರಾಮ ಪಂಚಾಯತಿಯನ್ನು ಮೇಲ್ದರ್ಜೆಗೇರಿಸಲು ಶಿಫಾರಸು ಮಾಡಲಾಗುವುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದ ನಮ್ಮ ಸರ್ಕಾರ ಮಹಿಳೆಯರ ಪರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮಿ ಯೋಜನೆಯಡಿ  ಈಗಾಗಲೇ 24 ಕಂತಿನ ಹಣ ಹಾಕಲಾಗಿದೆ. ನವೆಂಬರ್ 19ಕ್ಕೆ ಇಂದಿರಾಗಾಂಧಿ ಹುಟ್ಟುಹಬ್ಬದ ಪ್ರಯುಕ್ತ ಅಂಗನವಾಡಿ  ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಕ್ಕಾಪಡೆ, ಗೃಹಲಕ್ಷ್ಮಿ ವಿವಿಧೋದ್ದೇಶ ಸೊಸೈಟಿಯು ಉದ್ಘಾಟನೆ ಗೊಳ್ಳಲಿದೆ. ಸೊಸೈಟಿಯಲ್ಲಿ ಮೂರು ಲಕ್ಷ ರೂ ವರೆಗೆ ಸಾಲ ನೀಡಲಾಗುವುದು ಎಂದು ಸಚಿವರು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡೋಣ, ಉಳಿದ ವೇಳೆ ಅಭಿವೃದ್ಧಿ ಕೆಲಸಗಳತ್ತ ಗಮನಹರಿಸೋಣ, ವಿನಯ್ ಕುಮಾರ್ ಸೊರಕೆ ಅವರು ಸೋತರೂ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಕ್ಷೇತ್ರಕ್ಕೆ ಅನುದಾನ ತಂದಿದ್ದಾರೆ‌. ಹಾಗೆಯೇ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕನಸು‌ ಹೊಂದಿದ್ದಾರೆ. ನಾನು, ಸೊರಕೆ ಹಾಗೂ ಸುರೇಶ್ ಶೆಟ್ಟಿ, ಮೂವರೂ ಸೇರಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದರು.

ಸಮಾರಂಭದಲ್ಲಿ ಶಾಸಕ‌ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸವಿತ ರಾಜೇಶ್, ಕುರ್ಕಾಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಶಾಂತ್ ಎ ಪೂಜಾರಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.