ಉಡುಪಿ: ಬ್ರಹ್ಮಾವರ ತಾಲ್ಲೂಕಿನ ಬೈಕಾಡಿ ಗ್ರಾಮದ ಗಾಂಧಿನಗರದಲ್ಲಿ ಪುತ್ರನೊಬ್ಬ ತಂದೆ–ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ದಾರುಣ ಘಟನೆ ಭಾನುವಾರ ರಾತ್ರಿ ನಡೆದಿದೆ. ಗಾಂಧಿನಗರ ನಿವಾಸಿಗಳಾದ ಮೆಹಬೂಬ್ ಅಲಿ ಹಾಗೂ ಅವರ ಪತ್ನಿ ಶಂಶಾದ್ ಬೇಗಂ ಕೊಲೆಯಾದವರು. ಅವರ ಪುತ್ರ ಶಾಹಿದ್ ಅಲಿ (31) ಕೊಲೆ ಆರೋಪಿಯಾಗಿದ್ದು, ಆತನನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾನುವಾರ ರಾತ್ರಿ ಸುಮಾರು 7 ಗಂಟೆಗೆ ತಂದೆ–ತಾಯಿಯೊಂದಿಗೆ ಮಾತಿನ ಚಕಮಕಿ ನಡೆದ ಬಳಿಕ ಶಾಹಿದ್ ಅಲಿ ಇಬ್ಬರ ಮೇಲೂ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಆರೋಪಿ ಮೃತದೇಹಗಳನ್ನು ರಗ್ಗಿನಿಂದ ಸುತ್ತಿ ಮನೆಯಲ್ಲೇ ಇರಿಸಿದ್ದ ಎನ್ನಲಾಗಿದೆ.
ಸೋಮವಾರ ಬೆಳಿಗ್ಗೆ ಆರೋಪಿ ಶಾಹಿದ್ ಅಲಿ ತಾನೇ ತುರ್ತುಸೇವೆಯ 112 ಸಂಖ್ಯೆಗೆ ಕರೆ ಮಾಡಿ, ಮನೆಯಲ್ಲಿ ಸಮಸ್ಯೆಯಾಗಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ತೆರಳಿದ ಪೊಲೀಸರು ಎರಡು ಮೃತದೇಹಗಳನ್ನು ಪತ್ತೆಹಚ್ಚಿ, ಅಲ್ಲೇ ಇದ್ದ ಶಾಹಿದ್ ಅಲಿಯನ್ನು ವಶಕ್ಕೆ ಪಡೆದರು.
ಆರೋಪಿ ಆಹಾರ ವಿತರಣಾ ಕೆಲಸ ಮಾಡುತ್ತಿದ್ದ. ಅವಿವಾಹಿತನಾಗಿದ್ದ ಆತ ಹೆಚ್ಚಿನ ಸಮಯ ಮೊಬೈಲ್‌ನಲ್ಲೇ ತೊಡಗಿಸಿಕೊಂಡಿರುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ತಂದೆ–ತಾಯಿ ತನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ವಿಚಾರಣೆ ವೇಳೆ ಆರೋಪಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆದರೆ, ಸ್ಥಳೀಯರು ಮೆಹಬೂಬ್ ಅಲಿ ಹಾಗೂ ಶಂಶಾದ್ ಬೇಗಂ ಅವರ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೆಹಬೂಬ್ ಅಲಿ ಮಲ್ಪೆಯಲ್ಲಿ ಮೀನು ಸಾಗಿಸುವ ಲಾರಿಯ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಶಂಶಾದ್ ಬೇಗಂ ಕೂಡ ಊರವರು ಹಾಗೂ ಸಂಬಂಧಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ತಿಳಿಸಿದ್ದಾರೆ.
ಆರೋಪಿ ಮೊಬೈಲ್ ಗೀಳಿಗೆ ಒಳಗಾಗಿದ್ದನೇ, ಯಾವುದೇ ಆನ್‌ಲೈನ್ ಗೇಮಿಂಗ್ ಅಥವಾ ಇತರ ಚಟುವಟಿಕೆಯ ಪ್ರಭಾವಕ್ಕೆ ಒಳಗಾಗಿದ್ದನೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಕೃತ್ಯ ಎಸಗುವ ಸಂದರ್ಭದಲ್ಲಿ ಆತ ಯಾವುದೇ ಅಮಲು ಪದಾರ್ಥ ಸೇವಿಸಿದ್ದನೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಿಂದ ಗಾಂಧಿನಗರ ಕಾಲನಿಯ ನಿವಾಸಿಗಳು ಆಘಾತಕ್ಕೊಳಗಾಗಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

