ಉಡುಪಿ: ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ನಡೆದ ಅಪಘಾತದಲ್ಲಿ ಭಾರತೀಯ ಯೋಧ ಕನ್ನಡಿಗ ಅನೂಪ್ ಪೂಜಾರಿ ಹುತಾತ್ಮರಾಗಿದ್ದಾರೆ . ವೀರ ಯೋಧನ ದುರಂತ ಅಂತ್ಯಕ್ಕೆ ಇಡೀ ನಾಡು ಕಂಬನಿ ಮಿಡಿಯುತ್ತಿದೆ . ಇಂದು ಹುಟ್ಟೂರು ಉಡುಪಿಯಲ್ಲಿ ಅಂತಿಮಯಾತ್ರೆ ನಡೆಯಲಿದ್ದು ಸಕಲ ಸಿದ್ಧತೆ ನಡೆಯುತ್ತಿದೆ .
ಜಮ್ಮು ಕಾಶ್ಮೀರದ ಪೂಂಚ್ ನಡೆದ ಭೀಕರ ಅಪಘಾತದಲ್ಲಿ ತಾಯಿ ಭಾರತಾಂಬೆಯ ಸೇವೆಗೈಯ್ಯುತ್ತಿದ್ದ ವೀರ ಯೋಧರು ಸಾವನ್ನಪ್ಪಿದ್ದಾರೆ. ವೀರ ಯೋಧರನ್ನ ಹೊತ್ತೊಯ್ಯುತ್ತಿದ್ದ ಸೇನಾ ವಾಹನ 300 ಅಡಿ ಕಂದಕಕ್ಕೆ ಉರುಳಿ ಬಿದ್ದು ಐವರು ಯೋಧರು ಹುತಾತ್ಮರಾಗಿದ್ದಾರೆ . ಮೃತರಲ್ಲಿ ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕು ಬಿಜಾಡಿಯ ಯೋಧ ,ಹವಾಲ್ದಾರ್ ಅನೂಪ್ ಪೂಜಾರಿಯವರು ಹುತಾತ್ಮರಾಗಿದ್ದಾರೆ .ಕಳೆದ 13 ವರ್ಷಗಳಿಂದ ಸೈನ್ಯದಲ್ಲಿರುವ ಹವಾಲ್ದಾರ್ ಅನುಪ್ ಪೂಜಾರಿ ಅಗಲಿಕೆ ಅವರ ಹುಟ್ಟೂರು ಹಾಗು ಕುಟುಂಬಸ್ಥರಲ್ಲಿ ಶೋಖದಲ್ಲಿ ಮುಳುಗುವಂತೆ ಮಾಡಿದೆ
ನಿನ್ನೆ ರಾತ್ರಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹವಾಲ್ದಾರ್ ಅನೂಪ್ ಪೂಜಾರಿ ಪಾರ್ಥಿವ ಶರೀರ ಸೇನಾ ವಿಮಾನದಲ್ಲಿ ಆಗಮಿಸಿ .ಮಂಗಳೂರಿನ ಎನ್ ಸಿ ಸಿ ಬೆಟಾಲಿಯನ್ ಪಾರ್ಥಿವ ಸ್ವೀಕರಿಸಿದ ಬಳಿಕ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ . ಇಂದು ಬೆಳಗ್ಗೆ ಉಡುಪಿಯ ಕುಂದಾಪುರದ ತೆಕ್ಕಟ್ಟೆಯಿಂದ ಅನೂಪ್ ಹುಟ್ಟೂರು ಬೀಜಾಡಿವರೆಗೂ ರಾಷ್ಟೀಯ ಹೆದ್ದಾರಿಯಲ್ಲಿ ಪಾರ್ಥಿವದ ಮೆರವಣಿಗೆ ಸಾಗಲಿದೆ.

ಬಿಜಾಡಿ ಪಡು ಶಾಲೆಯಲ್ಲಿ ಅಂತಿಮ ದರ್ಶನದ ಬಳಿಕ ಅನೂಪ್ ಮನೆಯಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿದೆ. ಬೀಜಾಡಿ ಬೀಚ್ ಸಮೀಪ ಸರ್ಕಾರಿ ಜಾಗದಲ್ಲಿ ಅಂತ್ಯಸಂಸ್ಕಾರದ ಪ್ರಕ್ರಿಯೆಗಳು ನಡೆಯಲಿದೆ. ಈ ಬಗ್ಗೆ ಕುಟುಂಬಸ್ಥರು ಗ್ರಾಮಸ್ಥರು ಪೊಲೀಸರು ಸಭೆಗಳನ್ನು ನಡೆಸಿ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ
ಹವಾಲ್ದಾರ್ ಅನೂಪ್ ಪೂಜಾರಿ ಬಾಲ್ಯದಲ್ಲೇ ತಮ್ಮ ತಂದೆಯನ್ನ ಕಳೆದುಕೊಂಡಿದ್ದರು. ತಾಯಿ ಹಾಗು ಸಹೋದರಿಯರ ಜವಾಬ್ದಾರಿ ಹೊತ್ತಿದ್ದ ಅನೂಪ್ , ಬಾಲ್ಯದಲ್ಲೇ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಹಂಬಲ ಹೊಂದಿದ್ದರು .ಅದರಂತೆ ಸೇನೆಗೆ ಸೇರಿ ದೇಶ 13 ವರ್ಷಗಳಿಂದ ದೇಶ ಸೇವೆಗೈಯ್ಯುತ್ತಿದ್ದರು .ಇದರೊಂದಿಗೆ ಇಬ್ಬರು ಅಕ್ಕಂದಿರ ಮದುವೆ ಮಾಡಿಸಿ ಅದರ ಸಾಲವನ್ನು ತೀರಿಸಿದ್ದರು .
ಕಳೆದ ಮೂರೂ ವರ್ಷದ ಹಿಂದೆ ಮದುವೆಯಾದ ಅನೂಪ್ ಪೂಜಾರಿ ದಂಪತಿಗೆ ಪುಟ್ಟ ಮಗುವೂ ಇದೆ.20 ದಿನಗಳ ರಜೆ ಮುಗಿಸಿ ಕಳೆದ ಶನಿವಾರವಷ್ಟೇ ಅನೂಪ್ ಕಾಶ್ಮೀರಕ್ಕೆ ವಾಪಸ್ ಆಗಿದ್ದರು.ಮೂರು ತಿಂಗಳ ಬಳಿಕ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿ ಗುಜರಾತಿಗೆ ಬರಬೇಕಾಗಿತ್ತು ಆದರೆ ಅದಕ್ಕೂ ಮುನ್ನವೇ ಅನೂಪ್ ವಿಧಿಯ ಲೀಲೆಗೆ ಬಲಿಯಾಗಿದ್ದಾರೆ .ತಮ್ಮೂರಿನ ಕೆಚ್ಚೆದೆಯ ವೀರನ ದುರಂತ ಅಂತ್ಯ ಕಂಡು ಇಡೀ ಊರಿಗೆ ಊರೇ ಕಣ್ಣೀರಾಗಿದೆ.
ವೀರ ಯೋಧರ ದುರಂತ ಅಂತ್ಯ ಕಂಡು ಇಡೀ ಕರುನಾಡು ದುಃಖ ತಪ್ತವಾಗಿದೆ . ಇಂದು ಮೃತ ಯೋಧನಿಗೆ ಅಂತಿಮ ಗೌರವ ಸಲ್ಲಿಸಲು ಉಡುಪಿ ಸೇರಿದಂತೆ ಹಲವೆಡೆಯಿಂದ ಜನಸಮೂಹ ಆಗಮಿಸಲಿದ್ದು ಸರಕಾರ ಪೊಲೀಸ್ ಇಲಾಖೆ ಹಾಗು ಜಿಲ್ಲಾಡಳಿತ ಗೌರವಯುತ ಬೀಳ್ಕೊಡುಗೆ ನೀಡಲು ಸಜ್ಜಾಗುತ್ತಿದೆ.

