ಉಡುಪಿ: ಮಣಿಪಾಲ ಮತ್ತು ಕೊಳಲಗಿರಿಯನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾದ ಪರಾರಿ ಶೀಂಬ್ರಾ ಸೇತುವೆಯು ಪುಂಡು ಪೋಕರಿಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸೇತುವೆಯಲ್ಲಿ ಬೀದಿ ದೀಪಗಳಿದ್ದರೂ ಅವು ಉರಿಯುತ್ತಿಲ್ಲ. ನಗರಸಭೆ ವತಿಯಿಂದ ದೀಪ ಅಳವಡಿಸಿದರೂ, ಕಿಡಿಗೇಡಿಗಳು ಅದರ ವೈರ್ ಅನ್ನು ತುಂಡರಿಸುತ್ತಿದ್ದಾರೆ. ಮಾದಕ ವ್ಯಸನಿಗಳ ಕಾಟವೂ ಹೆಚ್ಚಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ರಾತ್ರಿ ವೇಳೆ ಈ ಭಾಗದಲ್ಲಿ ಸಂಚರಿಸಲು ಸಾರ್ವಜನಿಕರು, ಮಹಿಳೆಯರು ಹಾಗೂ ವಾಹನ ಸವಾರರು ಭಯ ಪಡುವಂತಾಗಿದೆ. ಈ ಸೇತುವೆಯ ಕಾಂಕ್ರಿಟ್ ಕಿತ್ತು ಹೋಗಿದ್ದು, ಕಬ್ಬಿಣದ ಸರಳುಗಳು ಮೇಲೆದ್ದಿವೆ. ಮಳೆ ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದೆ, ಸೇತುವೆಗೆ ಹಾನಿಯಾಗುತ್ತಿದೆ.
ಪ್ರತಿದಿನ ಸಾವಿರಾರು ವಾಹನಗಳು ಈ ಸೇತುವೆಯ ಮೂಲಕ ಸಂಚರಿಸುತ್ತಿದ್ದು, ಕೆಎಂಸಿ ಆಸ್ಪತ್ರೆ, ಮಣಿಪಾಲ, ಬ್ರಹ್ಮಾವರ, ಪೆರಡೂರು, ಮಂದಾರ್ತಿ, ಕೊಕ್ಕರ್ಣೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿರುವುದರಿಂದ ಸಮಸ್ಯೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಬೀದಿ ದೀಪಗಳನ್ನು ತಕ್ಷಣ ಕಾರ್ಯನಿರ್ವಹಿಸುವಂತೆ ಮಾಡಬೇಕು. ಸೇತುವೆಯ ಮೇಲಿನ ಕಸ ಮತ್ತು ಖಾಲಿ ಮದ್ಯದ ಬಾಟಲಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು. ಸೇತುವೆಯ ಎರಡೂ ಬದಿಯ ರಸ್ತೆಯ ಪೊದೆಗಳನ್ನು ತೆರವುಗೊಳಿಸಬೇಕು.
ಸೇತುವೆಯ ಮೇಲೆ ವಾಹನ ನಿಲ್ಲಿಸಿ ಅಕ್ರಮವಾಗಿ ಗುಂಪುಗೂಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇನ್ನಷ್ಟು ದೊಡ್ಡ ಅನಾಹುತ ಸಂಭವಿಸುವ ಮೊದಲು ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಆಗ್ರಹಿಸಿದ್ದಾರೆ.

