ಉಡುಪಿ: ಬೇಸಿಗೆ ರಜೆ ಬಳಿಕ ರಾಜ್ಯದಾದ್ಯಂತ ಸೋಮವಾರ ಶಾಲೆಗಳು ಪುನರಾರಂಭಗೊಂಡಿದ್ದು, ಉಡುಪಿ ಜಿಲ್ಲೆಯ ಶಾಲೆಗಳಲ್ಲೂ ಹೊಸ ಶೈಕ್ಷಣಿಕ ವರ್ಷದ ಆರಂಭ ಸಂಭ್ರಮ–ಸಡಗರದಿಂದ ನಡೆಯಿತು.

2026–27ನೇ ಶೈಕ್ಷಣಿಕ ವರ್ಷದ ತರಗತಿಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿತ್ತು. ಶಾಲಾ ಪ್ರಾರಂಭವನ್ನು ಹಬ್ಬದ ವಾತಾವರಣದಲ್ಲಿ ಆಚರಿಸುವಂತೆ ಇಲಾಖೆ ಸೂಚನೆ ನೀಡಿದ್ದರಿಂದ, ಅನೇಕ ಶಾಲೆಗಳನ್ನು ತಳಿರು–ತೋರಣ, ರಂಗೋಲಿ ಹಾಗೂ ಅಲಂಕಾರಗಳಿಂದ ಸಿಂಗಾರಿಸಲಾಗಿತ್ತು. ವಿದ್ಯಾರ್ಥಿಗಳನ್ನು ಶಿಕ್ಷಕರು ಆತ್ಮೀಯವಾಗಿ ಬರಮಾಡಿಕೊಂಡರು.

ಕಾಪು ತಾಲೂಕಿನ ಪಡುಬಿದ್ರಿಯ ಶ್ರೀನಾರಾಯಣಗುರು ಎಜುಕೇಶನ್ ಇನ್‌ಸ್ಟಿಟ್ಯೂಟ್‌ ಸೇರಿದಂತೆ ಜಿಲ್ಲೆಯ ಹಲವು ಶಾಲೆಗಳಲ್ಲಿ ವಿಶೇಷ ಸ್ವಾಗತ ಕಾರ್ಯಕ್ರಮಗಳು ನಡೆದವು. ಉಡುಪಿಯ ಒಳಕಾಡು ಸರ್ಕಾರಿ ಶಾಲೆಯಲ್ಲೂ ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಗೆ ಆಗಮಿಸಿ ಹೊಸ ಶೈಕ್ಷಣಿಕ ಪಯಣ ಆರಂಭಿಸಿದರು.

ಬೆಳಗಿನ ಪ್ರಾರ್ಥನಾ ಸಭೆಯೊಂದಿಗೆ ಶಾಲಾ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಬಳಿಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂವು ನೀಡಿ ಸ್ವಾಗತಿಸಿದರು. ಹೊಸದಾಗಿ ದಾಖಲಾದ ಮಕ್ಕಳಿಗೆ ವಿಶೇಷ ಗಮನ ನೀಡಿ, ತರಗತಿ ಕೊಠಡಿಗಳ ಪರಿಚಯ ಮಾಡಿಕೊಡಲಾಯಿತು.

ಮೊದಲ ಬಾರಿಗೆ ಮಕ್ಕಳನ್ನು ಶಾಲೆಗೆ ಕರೆತಂದ ಪೋಷಕರು ಸಹ ಶಾಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ರಜೆಯ ಬಳಿಕ ಸಹಪಾಠಿಗಳು ಹಾಗೂ ಶಿಕ್ಷಕರನ್ನು ಭೇಟಿಯಾದ ವಿದ್ಯಾರ್ಥಿಗಳು ಸಂಭ್ರಮ ವ್ಯಕ್ತಪಡಿಸಿದರು.

ಸರ್ಕಾರದ ನಿರ್ದೇಶನದಂತೆ ಹಲವು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ಸಿಹಿ ತಿಂಡಿಗಳನ್ನು ವಿತರಿಸಲಾಯಿತು. ನೂತನ ವಿದ್ಯಾರ್ಥಿಗಳಿಗೆ ವಿಶೇಷ ಸ್ವಾಗತ ಕಾರ್ಯಕ್ರಮಗಳನ್ನೂ ಆಯೋಜಿಸಲಾಯಿತು.

ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳು ಸುಗಮವಾಗಿ ಪುನರಾರಂಭಗೊಂಡಿದ್ದು, ಹೊಸ ಶೈಕ್ಷಣಿಕ ವರ್ಷವು ವಿದ್ಯಾರ್ಥಿಗಳ ಕಲಿಕೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಲಿದೆ ಎಂಬ ವಿಶ್ವಾಸವನ್ನು ಶಾಲಾ ಆಡಳಿತ ಮಂಡಳಿಗಳು ವ್ಯಕ್ತಪಡಿಸಿವೆ.

View this post on Instagram

A post shared by News Karnataka (@newskarnataka)