ಉಡುಪಿ: ಸಹಕಾರ ಭಾರತಿಯ ರಾಜ್ಯ ಕಾರ್ಯಕಾರಣಿ ಮತ್ತು ಪ್ರಾಂತ ಅಭ್ಯಾಸ ವರ್ಗವು ಇದೇ ಫೆ. 8 ಮತ್ತು 9ರಂದು ಎರಡು ದಿನಗಳ ಕಾಲ ಮಣಿಪಾಲದ ಆರ್ ಎಸ್ ಬಿ ಸಭಾಭವನದ ಪ್ರಥಮ ಮಹಡಿಯಲ್ಲಿ ನಡೆಯಲಿದೆ ಎಂದು ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಫೆ. 8ರಂದು ಬೆಳಿಗ್ಗೆ 11ಗಂಟೆಗೆ ಕಾರ್ಯಕಾರಣಿಯ ಉದ್ಘಾಟನೆ ನಡೆಯಲಿದ್ದು, ಸಹಕಾರ ಭಾರತಿ ರಾಜ್ಯಾಧ್ಯಕ್ಷ ಪ್ರಭುದೇವ ಆರ್. ಮಾಗನೂರು ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೀಪಕ್ ಚೌರಾಷಿಯಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ರಾಜ್ಯದ ನಾಲ್ಕು ವಿಭಾಗಗಳಿಂದ 32 ಸಂಘಟನಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ಮಹಿಳಾ ಪ್ರಮುಖ್ ಹಾಗೂ ಸಹ ಪ್ರಮುಖ್ ಜೊತೆಗೆ ರಾಜ್ಯ ಸಮಿತಿಯ ವಿವಿಧ ಜವಾಬ್ದಾರಿಗಳನ್ನು ಹೊಂದಿರುವ ಪ್ರಮುಖರು, ರಾಜ್ಯ ಮತ್ತು ಕರ್ನಾಟಕ ರಾಜ್ಯದಿಂದ ಆಯ್ಕೆಗೊಂಡಿರುವ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಅಂದು ಮಧ್ಯಾಹ್ನ 1 ಗಂಟೆಯವರೆಗೆ ಸಹಕಾರ ಭಾರತಿಯ ಸಂಘಟನಾತ್ಮಕ ವಿಚಾರಗಳು ಹಾಗೂ ಕಾರ್ಯ ವಿಸ್ತರಣೆಯ ಬಗ್ಗೆ ವಿಸ್ತ್ರತವಾಗಿ ಚರ್ಚೆ ನಡೆಯಲಿದೆ. ಶನಿವಾರ 3 ಗಂಟೆಗೆ ಪ್ರಾಂತ ಅಭ್ಯಾಸ ವರ್ಗವನ್ನು ಸಹಕಾರ ಭಾರತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ದೀಪಕ್ ಚೌರಶಿಯರವರು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಹಾಲು ಪ್ರಕೋಷ್ಟ್ರದ ಸಂಚಾಲಕರಾದ ಬೋಳ ಸದಾಶಿವ ಶೆಟ್ಟಿ, ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಮಂಜುನಾಥ ಎಸ್ಕೆ, ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷರಾದ ದಿನೇಶ್ ಹೆಗ್ಡೆ ಆತ್ರಾಡಿ, ಪ್ರಧಾನ ಕಾರ್ಯದರ್ಶಿಗಳಾದ ಸುಧೀಶ್ ನಾಯಕ್, ಸಂಘಟನಾ ಕಾರ್ಯದರ್ಶಿಗಳಾದ ಸುಜಿತ್ ಶೆಟ್ಟಿ ಉಪಸ್ಥಿತರಿದ್ದರು.

