ಉಡುಪಿ: ಉಡುಪಿ ಜಿಲ್ಲೆಯ ಪೊಲೀಸರು ಈಗ ಫಿಟ್ನೆಸ್ ಮೊರೆ ಹೋಗಿದ್ದಾರೆ.ಕಳೆದ ಕೆಲವು ದಿನಗಳಿಂದ ಪರೀಕದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಶಿಬಿರ ನಡೆಯುತ್ತಿದೆ. ನವಚೇತನ ಶಿಬಿರದಲ್ಲಿ ಜಿಲ್ಲೆಯ 71 ಪೊಲೀಸರು ಭಾಗವಹಿಸಿದ್ದಾರೆ.

ದಢೂತಿ ದೇಹ, ಬೊಜ್ಜು ಹೊಂದಿರುವ 71 ಮಂದಿ ಪೊಲೀಸರಿಗೆ 30 ದಿನಗಳ ಶಿಬಿರ ಇದು. ಒಟ್ಟು 71 ಮಂದಿಯಲ್ಲಿ 62 ಮಂದಿ ಪುರುಷ ಮತ್ತು 9 ಮಂದಿ ಮಹಿಳಾ ಪೊಲೀಸರಿದ್ದಾರೆ. ಓರ್ವ ಎಸ್ಐ, 12 ಮಂದಿ ಎಎಎಸ್ಐ, 35 ಮಂದಿ ಹೆಡ್ ಕಾನ್ಸ್ಟೆಬಲ್, 23 ಮಂದಿ ಪೊಲೀಸ್ ಕಾನ್ ಸ್ಟೇಬಲ್ ಶಿಬಿರದಲ್ಲಿ ಈಗ ದೇಹ ದಂಡನೆಯಲ್ಲಿ ತೊಡಗಿದ್ದಾರೆ. ಬೆಳಗ್ಗೆ 6.30ಕ್ಕೆ ಆರಂಭಗೊಳ್ಳುವ ಶಿಬಿರವು ಸಂಜೆ 6.30ರ ವರೆಗೆ ನಡೆಯುತ್ತದೆ.
ಇದರಲ್ಲಿ 6 ಸೆಷನ್ಸ್ ಗಳಿವೆ. ತಜ್ಞರಿಂದ ಯೋಗ, ದೈಹಿಕ ಶಿಬಿರ, ಝುಂಬಾ, ಜಿಮ್ ಮತ್ತು ಕರಾಟೆ ತರಗತಿಗಳಿವೆ. ಒತ್ತಡ ರಹಿತ ಉತ್ತಮ ಜೀವನ ನಡೆಸಲು ಅಗತ್ಯವಿರುವ ಹಲವು ವಿಷಯಗಳ ಬಗ್ಗೆ ತಜ್ಞರಿಂದ ಉಪನ್ಯಾಸವನ್ನೂ ಏರ್ಪಡಿಸಲಾಗಿದೆ. ಜತೆಗೆ ಪ್ರಕೃತಿ ನಡಿಗೆ, ವಿಶೇಷ ಪಥ್ಯಾಹಾರಕ್ಕೂ ಒತ್ತು ನೀಡಲಾಗುತ್ತಿದೆ. ಇವೆಲ್ಲವೂ ಸಂಪೂರ್ಣ ಉಚಿತ.

