ಉಡುಪಿ: ಕರಾವಳಿಯ ಕೃಷಿ ಪರಂಪರೆಯ ಹೆಮ್ಮೆಯ ಮಟ್ಟುಗುಳ್ಳ ಬದನೆಕಾಯಿ ಬೆಳೆ ಈ ಬಾರಿ ಸಂಕಷ್ಟಕ್ಕೆ ಸಿಲುಕಿದೆ. ಮಳೆ ಕೊರತೆ, ನೀರಿನ ಅಭಾವ ಹಾಗೂ ಪಿನಾಕಿನಿ ನದಿಯಲ್ಲಿ ಹೂಳು ತುಂಬಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆ ಉಪ್ಪು ನೀರಿನ ಹಾವಳಿಯ ಭೀತಿಯೂ ಬೆಳೆಗಾರರನ್ನು ಕಾಡುತ್ತಿದ್ದು, ವಾಡಿಕೆಯಂತೆ ಎಕರೆಗಟ್ಟಲೆ ಮಟ್ಟುಗುಳ್ಳ ಬೆಳೆಯುತ್ತಿದ್ದ ಮಟ್ಟು ಗ್ರಾಮದಲ್ಲಿ ಈ ಬಾರಿ ಬೆರಳೆಣಿಕೆಯಷ್ಟು ರೈತರು ಮಾತ್ರ ನಾಟಿಗೆ ಮುಂದಾಗಿದ್ದಾರೆ.
ಮಟ್ಟುಗುಳ್ಳ ತನ್ನದೇ ಆದ ಹಸಿರು ಬಣ್ಣ, ವಿಶಿಷ್ಟ ರುಚಿ, ಆಕಾರ ಹಾಗೂ ಗುಣಮಟ್ಟದಿಂದ ನಾಡಿನಾದ್ಯಂತ ಜನಪ್ರಿಯತೆ ಪಡೆದಿದೆ. ಪ್ರತಿ ವರ್ಷ ಸೆಪ್ಟೆಂಬರ್ ಮೊದಲ ವಾರದಿಂದ ಮಟ್ಟು ಗ್ರಾಮದಲ್ಲಿ ನಾಟಿ ಕಾರ್ಯ ಚುರುಕುಗೊಳ್ಳುತ್ತಿತ್ತು. ಆದರೆ ಈ ಬಾರಿ ಮಳೆ-ಬಿಸಿಲಿನ ಕಣ್ಣಾಮುಚ್ಚಾಲೆ ಹಾಗೂ ಮಳೆ ಕೊರತೆಯಿಂದಾಗಿ ರೈತರು ಕೃಷಿ ಆರಂಭಿಸಲು ಹಿಂದೇಟು ಹಾಕುವಂತಾಗಿದೆ.
ಮಟ್ಟುಗುಳ್ಳ ಕೃಷಿಗೆ ಪಿನಾಕಿನಿ ನದಿಯ ನೀರನ್ನೇ ಅವಲಂಬಿಸಿರುವ ರೈತರಿಗೆ ನದಿಯಲ್ಲಿ ಹೂಳು ತುಂಬಿರುವುದು ಮತ್ತೊಂದು ಸಮಸ್ಯೆಯಾಗಿದೆ. ಹೂಳು ತೆರವುಗೊಳಿಸದಿರುವುದರಿಂದ ನೀರಿನ ಹರಿವು ಹಾಗೂ ಲಭ್ಯತೆ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ರೈತರ ಅಳಲು. ನದಿಯ ಹೂಳು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.
ಇದರ ನಡುವೆ ನದಿಗೆ ಉಪ್ಪು ನೀರು ನುಗ್ಗುವ ಭೀತಿಯೂ ಬೆಳೆಗಾರರನ್ನು ಕಾಡುತ್ತಿದೆ. ಉಪ್ಪು ನೀರಿನ ಹಾವಳಿಯಿಂದ ಮಣ್ಣಿನ ಗುಣಮಟ್ಟಕ್ಕೆ ಹಾನಿಯಾಗುವುದರ ಜತೆಗೆ ಬೆಳೆಯ ಮೇಲೂ ದುಷ್ಪರಿಣಾಮ ಬೀರುವ ಆತಂಕ ರೈತರಲ್ಲಿದೆ. ಉಪ್ಪು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ನೀರು ಸಿಗದೆ ಇಳುವರಿ ಕುಂಠಿತವಾದರೆ ಕೃಷಿಗೆ ಮಾಡಿರುವ ವೆಚ್ಚವೂ ವಾಪಸ್ ಬಾರದ ಸ್ಥಿತಿ ನಿರ್ಮಾಣವಾಗಬಹುದು. ಇದರಿಂದ ರೈತರ ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಮಟ್ಟುಗುಳ್ಳದ ರುಚಿ, ಗುಣಮಟ್ಟ ಹಾಗೂ ಕೃಷಿ ಪರಂಪರೆ ಉಳಿಸಿಕೊಳ್ಳಲು ನದಿಯ ಹೂಳು ತೆರವು, ನೀರಿನ ಲಭ್ಯತೆ ಹಾಗೂ ಉಪ್ಪು ನೀರಿನ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಬೆಳೆಗಾರರು ಆಗ್ರಹಿಸಿದ್ದಾರೆ.
– ಲಕ್ಷ್ಮಣ, ಮಟ್ಟುಗುಳ್ಳ ಕೃಷಿಕ

