ಉಡುಪಿ: ಉದ್ಘಾಟನೆಗೊಂಡು 8 ತಿಂಗಳುಗಳೇ ಕಳೆದರೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿಲ್ಲದ ಸಾರ್ವಜನಿಕ ಶೌಚಾಲಯ. ಕಾಪು ಪುರಸಭೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಶೌಚಾಲಯವೊಂದು ಉಪಯೋಗಕ್ಕೆ ಬಾರದೆ ನಿರುಪಯುಕ್ತವಾಗಿದೆ.
ಹೌದು, ಕಾಪು ಪುರಸಭೆ ವ್ಯಾಪ್ತಿಯ ಮಾರುಕಟ್ಟೆಯ ಬಳಿ ನಿರ್ಮಿಸಿರುವ ಶೌಚಾಲಯವು ಉದ್ಘಾಟನೆಗೊಂಡು 8 ತಿಂಗಳುಗಳೇ ಕಳೆದಿವೆ. ಆದರೆ ಸಾರ್ವಜನಿಕರ ಉಪಯೋಗಕ್ಕೆ ಕಾಪು ಪುರಸಭೆ ಇನ್ನೂ ಕೂಡ ಬಿಟ್ಟುಕೊಟ್ಟಿಲ್ಲ. ಇದರಿಂದ ಪ್ರತಿ ಶುಕ್ರವಾರ ನಡೆಯುವ ವಾರದ ಸಂತೆಗೆ ಬೇರೆ ಊರುಗಳಿಂದ ಬರುವ ರೈತರು, ಮಹಿಳೆಯರು ಶೌಚಾಲಯ ವ್ಯವಸ್ಥೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಸುಸಜ್ಜಿತ ಶೌಚಾಲಯ ನಿರ್ಮಾಣಗೊಂಡಿದ್ದರೂ ಸಾರ್ವಜನಿಕರ ಉಪಯೋಗಕ್ಕೆ ಬಾರದೆ ನಿರುಪಯುಕ್ತವಾಗಿದೆ.
ಇದರ ವಿರುದ್ಧ ಸ್ಥಳೀಯರು, ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಾರ್ವಜನಿಕರ ಉಪಯೋಗಕ್ಕೆ ಶೌಚಾಲಯವನ್ನು ಬಿಟ್ಟುಕೊಡುವಂತೆ ವಿನಂತಿಸಿದ್ದಾರೆ. ಕಾಪು ಪುರಸಭೆಯ ವ್ಯಾಪ್ತಿಯಲ್ಲಿ ನಡೆಯುವ ವಾರದ ಸಂತೆ ಸಮಸ್ಯೆಗಳ ಕೂಡಾಗಿದೆ.
ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದೆ ಸರ್ವಿಸ್ ರಸ್ತೆಯ ಮೇಲೆಯೇ ಸಂತೆ ನಡೆಯುತ್ತಿದೆ. ಅಡ್ಡಾದಿಡ್ಡಿ ವಾಹನಗಳನ್ನು ಪಾರ್ಕ್ ಮಾಡುವುದರಿಂದ ಸಾರ್ವಜನಿಕರ ಸಂಚಾರಕ್ಕೂ ತೊಂದರೆ ಉಂಟಾಗುತ್ತಿದೆ. ತರಕಾರಿ ಮಾರಾಟ ಮಾಡುವ ರೈತರಿಂದ ಹೆಚ್ಚುವರಿ ಸುಂಕ ವಸೂಲಿ ಮಾಡುವ ಪುರಸಭೆ, ಯಾವುದೇ ಮೂಲಭೂತ ಸೌಕರ್ಯವನ್ನು ಒದಗಿಸುತ್ತಿಲ್ಲ ಎಂದು ವ್ಯಾಪಾರಸ್ಥರು ದೂರಿದ್ದಾರೆ.

