ಉಡುಪಿ: ಕರಾವಳಿಯ ಏಕೈಕ ಸಕ್ಕರೆ ಕಾರ್ಖಾನೆ ಬ್ರಹ್ಮಾವರದ ಸಹಕಾರಿ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದಿರುವ ಬಹುಕೋಟಿ ವಂಚನೆ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಉಡುಪಿ ಜಿಲ್ಲಾ ರೈತ ಸಂಘ ಧರಣಿ ನಡೆಸುತ್ತಿದೆ.
ಸಕ್ಕರೆ ಕಾರ್ಖಾನೆ ಎದುರು ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ 25ನೇ ದಿನವನ್ನು ಪೂರ್ಣಗೊಳಿಸಿದೆ.2021-22ನೇ ಸಾಲಿನಲ್ಲಿ ಕಾರ್ಖಾನೆಯ ಗುಜರಿ ಮಾರಾಟದ ಹೆಸರಿನಲ್ಲಿ 14 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ಹಗರಣದ ತನಿಖೆಯ ಪ್ರತಿ ಹಂತದಲ್ಲೂ ಆಗುತ್ತಿರುವ ವಿಳಂಬವನ್ನು ವಿರೋಧಿಸಿ ಮಾಜಿ ಶಾಸಕ ಹಾಗೂ ವಿಧಾನಪರಿಷತ್ನ ಮಾಜಿ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ ನೇತೃತ್ವದಲ್ಲಿ ವಿವಿಧ ರೈತ ಸಂಘಟನೆಗಳು ಫೆ.22ರಿಂದ ಅಹೋರಾತ್ರಿ ಧರಣಿ ನಡೆಸುತ್ತಿವೆ.
ಧರಣಿಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಕುಂದಾಪುರ ಶಾಖೆಯ ಸಂಚಾಲಕರಾದ ಸಂಪತ್ಕುಮಾರ್ ಶೆಟ್ಟಿ ಕಾವ್ರಾಡಿ, ನಿರ್ದೇಶಕ ರಾದ ಚಿತ್ತರಂಜನ್ ಹೆಗ್ಡೆ ಅಂಪಾರು ಕಿರಣ್ ಹೆಗ್ಡೆ ಸುಧಾಕರ ಶೆಟ್ಟಿ, ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ, ರೇವತಿ ಶೆಟ್ಟಿ, ವಾಣಿ ಮೊಳಹಳ್ಳಿ ಸಂಪಿಗೇಡಿ ಸಂಜೀವ ಶೆಟ್ಟಿ, ರಮೇಶ ಶೆಟ್ಟಿ ಗುಲ್ವಾಡಿ ಮುಂತಾದವರು ಪಾಲ್ಗೊಂಡಿದ್ದಾರೆ.
ಇತ್ತೀಚೆಗೆ ಮಾಜಿ ಡಿಸಿಎಂ ಡಿಕೆಶಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದ್ದರು.ಆದರೂ ಸರಕಾರದ ಕಡೆಯಿಂದ ಧರಣಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ.

