ಉಡುಪಿ: ಕರಾವಳಿ ಸಚಿವ ಸಂಪುಟ ಸಭೆಯಲ್ಲಿ ರೈತರು ಹಾಗೂ ಕರಾವಳಿ ಭಾಗದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಆಗ್ರಹಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಶೆಟ್ಟಿ, ಕಸ್ತೂರಿರಂಗನ್ ವರದಿಯಿಂದ ಬಾಧಿತ ರೈತರ ರಕ್ಷಣೆ, ವಾರಾಹಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವುದು ಹಾಗೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರ್‌ಸ್ಥಾಪನೆಗೆ ₹100 ಕೋಟಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿ ತಾಲೂಕಿಗೆ ಒಂದರಂತೆ ಫಸಲು ದಾಸ್ತಾನು ಗೋದಾಮು ನಿರ್ಮಿಸಬೇಕು. ಬಾಕಿ ಇರುವ ಭೂಮಿ ಹಕ್ಕುಪತ್ರ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಡಿ.ಸಿ. ಮನ್ನಾ ಭೂಮಿ ಹಂಚಿಕೆ, ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಯುಪಿಸಿಎಲ್‌ನಿಂದ ರೈತರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕು. ದೇವಾಲಯಗಳ ಅಭಿವೃದ್ಧಿಗೆ ಆದ್ಯತೆ ನೀಡುವುದರೊಂದಿಗೆ ಕರಾವಳಿ ಭಾಗಕ್ಕೆ ವಿಶೇಷ ಬಜೆಟ್ ಹಾಗೂ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಭಾಸ್ಕರ್ ಶೆಟ್ಟಿ ತೆಕ್ಕಟ್ಟೆ, ಶೇಖರ್ ಕೋಟ್ಯಾನ್ ಉದ್ಯಾವರ, ಹರೀಶ್ ಶೆಟ್ಟಿ ಕೀಳಿಂಜೆ ಹಾಗೂ ರಾಯ್ಸ್ ಮರ್ವಿನ್ ಉಪಸ್ಥಿತರಿದ್ದರು.