ಉಡುಪಿ: ಬ್ರಹ್ಮಾವರದ ಕುಂಜಾಲಿನಲ್ಲಿ ಇತ್ತೀಚೆಗೆ ನಡೆದ ಗೋಹತ್ಯೆ ಪ್ರಕರಣ ಪೂರ್ವನಿಯೋಜಿತ ಕೃತ್ಯವಾಗಿರಬೇಕೆಂಬ ಸಂಶಯವನ್ನು ಹುಟ್ಟಿಸಿದ್ದು, ಪೊಲೀಸರು ಈಗಾಗಲೇ ನೈಜ್ಯ ಆರೋಪಿಗಳನ್ನು ಬಂಧಿಸಿದ್ದರೂ ಸಮಗ್ರ ತನಿಖೆ ನಡೆಸಿ ಸತ್ಯವನ್ನು ಬಹಿರಂಗ ಪಡಿಸಬೇಕು ಎಂದು ಎಸ್‌ಡಿಪಿಐ ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಈ ಬಗ್ಗೆ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು, ಕುಂಜಾಲು ಪ್ರಕರಣದ ಹಿಂದೆ ಬಿಜೆಪಿ ಹಾಗೂ ಸಂಘ ಪರಿವಾರದ ಕೈವಾಡ ಇರುವ ಶಂಕೆ ಇದ್ದು, ಈ ಬಗ್ಗೆ ಪೊಲೀಸರು ವಿಸ್ತೃತವಾದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಘಟನೆ ನಡೆದ ಸಂದರ್ಭದಲ್ಲಿ ಪೊಲೀಸರು ತನಿಖೆ ನಡೆಸುವುದಕ್ಕಿಂತ ಮುಂಚೆಯೇ ಇದನ್ನು ಒಂದು ಸಮುದಾಯದವರೇ ಮಾಡಿದ್ದಾರೆ ಎಂಬ ರೀತಿಯಲ್ಲಿ ಉಡುಪಿ ಶಾಸಕರು ಹೇಳಿಕೆ ನೀಡಿದ್ದು, ಈ ಮೂಲಕ ಸೌಹಾರ್ದತೆಯನ್ನು ಕೆಡಿಸುವ ಪ್ರಯತ್ನವನ್ನು ಮಾಡಿದ್ದರು. ಅಲ್ಲದೇ ಪೊಲೀಸರು ಪ್ರಕರಣದ ನಿಜವಾದ ಆರೋಪಿಗಳನ್ನು ಬಂಧಿಸಿದ ನಂತರವೂ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಇದರ ಹಿಂದೆ ಮುಸ್ಲಿಮರಿದ್ದಾರೆ ಎಂಬ ಹೇಳಿಕೆಯನ್ನು ನೀಡಿ ಮುಸ್ಲಿಂ ಸಮುದಾಯವನ್ನು ಎತ್ತಿ ಕಟ್ಟುವ ಪ್ರಯತ್ನವನ್ನು ಮಾಡಿದ್ದರು ಎಂದು ರಿಯಾಜ್ ಹೇಳಿದರು.
ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಇಂತಹ ಘಟನೆಗಳನ್ನು ನಡೆಸುವ ಮೂಲಕ ಸೌಹಾರ್ದ ತೆಯನ್ನು ಕೆಡಿಸಿ ಇದರ ರಾಜಕೀಯ ಲಾಭವನ್ನು ಪಡೆಯುವ ಷಡ್ಯಂತ್ರವೂ ಈ ಘಟನೆ ಹಿಂದೆ ಇರುವ ಸಾಧ್ಯತೆ ಇದೆ. ಆದ್ದರಿಂದ ಪೊಲೀಸರು ಈ ಘಟನೆ ಪೂರ್ವ ನಿಯೋಜಿತವೇ ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಸಿ ಇದರ ಹಿಂದಿರುವ ಕಾಣದ ಕೈಗಳನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.

