ಉಡುಪಿ: ಅಮೇರಿಕದ ಅರಿಜೋನಾ ರಾಜ್ಯದ ಫೀನಿಕ್ಸ್ ಮಹಾನಗರದಲ್ಲಿರುವ ,ಉಡುಪಿ ಪುತ್ತಿಗೆ ಮಠದ ಅಧೀನದ ಶ್ರೀ ವೆಂಕಟಕೃಷ್ಣ ಮಂದಿರದಲ್ಲಿ ವಿರಾಜಮಾನರಾಗಿರುವ ಶ್ರೀ ಪದ್ಮಾವತಿ ದೇವಿಗೆ, ಭಕ್ತರೊಬ್ಬರು ಸುಮಾರು ₹2 ಕೋಟಿ ಮೌಲ್ಯದ ಸ್ವರ್ಣ ಕಿರೀಟವನ್ನು ಸಮರ್ಪಿಸುತ್ತಿದ್ದಾರೆ.

ಈ ಕಿರೀಟವನ್ನು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಜನ್ಮ ನಕ್ಷತ್ರದ ಶುಭಸಂದರ್ಭದಲ್ಲಿ, ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ದೇವಿಗೆ ಸಮರ್ಪಿಸಲಾಗುತ್ತದೆ. ಪುತ್ತಿಗೆ ಶ್ರೀಪಾದರು ಈ ಸ್ವರ್ಣ ಕಿರೀಟವನ್ನು ವಿಶೇಷ ಪೂಜೆಯೊಂದಿಗೆ ಬಾಲಕೃಷ್ಣನಿಗೆ ಸಮರ್ಪಿಸಿ, ಬಳಿಕ ಅದನ್ನು ಫೀನಿಕ್ಸ್ ಶ್ರೀ ವೆಂಕಟಕೃಷ್ಣ ಮಂದಿರದಲ್ಲಿ ಶ್ರೀ ಪದ್ಮಾವತಿ ದೇವಿಗೆ ಅರ್ಪಿಸುವ ಸಲುವಾಗಿ ಸಂಬಂಧಿತ ಭಕ್ತರಿಗೆ ಹಸ್ತಾಂತರಿಸಿದರು.

ಅಮೇರಿಕದಲ್ಲಿ ಶ್ರೀಪಾದರು ಸ್ಥಾಪಿಸಿರುವ ಹನ್ನೊಂದು ದೇವಸ್ಥಾನಗಳಲ್ಲಿ ಮೊದಲನೆಯದು ಹಾಗೂ 2000 ರಲ್ಲಿ ಸ್ಥಾಪನೆಯಾದ ಪ್ರಥಮ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಫೀನಿಕ್ಸ್‌ನ ಶ್ರೀ ವೆಂಕಟಕೃಷ್ಣ ಮಂದಿರ ಪಾತ್ರವಾಗಿದೆ. ಇಂದು ಈ ಕ್ಷೇತ್ರವು ಉತ್ತರ ಅಮೆರಿಕಾದ ಭಾರತೀಯರ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿ ಬೆಳೆಯುತ್ತಿದೆ.