ಉಡುಪಿ: ಸಹಕಾರಿ ಸಂಸ್ಥೆಗಳು ಜನರ ವಿಶ್ವಾಸ ಗಳಿಸಿಕೊಂಡಾಗ ಮಾತ್ರ ದೀರ್ಘಕಾಲಿಕ ಯಶಸ್ಸು ಸಾಧಿಸಲು ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.
ನಗರದ ಕಿನ್ನಿಮುಲ್ಕಿಯ ಶಾಂತಾ ಬಿಲ್ಡಿಂಗ್‌ನಲ್ಲಿ ಆರಂಭಗೊಂಡ ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿ, ಬಳಿಕ ಶ್ರೀ ವೀರಭದ್ರ ಕಲಾಭವನದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ದೇಶದ ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದು, ಇಲ್ಲಿನ ಪರಸ್ಪರ ಸಹಕಾರದ ಸಂಸ್ಕೃತಿ ಹಾಗೂ ಸಮಾಜದೊಂದಿಗೆ ಬೆಸೆದುಕೊಂಡು ಕಾರ್ಯನಿರ್ವಹಿಸುವ ಸಂಸ್ಥೆಗಳ ಪರಂಪರೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು. ಹೊಸದಾಗಿ ಆರಂಭಗೊಂಡಿರುವ ಕಿದಿಯೂರು ಕ್ರೆಡಿಟ್ ಕೋ-ಆಪ್ ಸೊಸೈಟಿ ಜನರ ವಿಶ್ವಾಸ ಗಳಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ಆರಂಭಿಸಿ ಉತ್ತಮ ಸೇವೆ ನೀಡಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ಯಾಮಿಲಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ. ಜಿ. ಶಂಕರ್ ಹಾಗೂ ಎಂಆರ್‌ಜಿ ಗ್ರೂಪ್‌ನ ಆಡಳಿತ ನಿರ್ದೇಶಕ ಡಾ. ಕೆ. ಪ್ರಕಾಶ್ ಶೆಟ್ಟಿ, ಸಣ್ಣ ಹಣಕಾಸು ಸಂಸ್ಥೆಗಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಸೂಕ್ತ ನಿಯಮಗಳನ್ನು ರೂಪಿಸಬೇಕೆಂದು ಮನವಿ ಮಾಡಿದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಕಿದಿಯೂರು ಕ್ರೆಡಿಟ್ ಕೋ-ಆಪ್ ಸೊಸೈಟಿ ಸಮಾಜಮುಖಿ ಸೇವೆಗಳ ಮೂಲಕ ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಶುಭ ಹಾರೈಸಿದರು. ಸೊಸೈಟಿ ಅಧ್ಯಕ್ಷ ಕೆ. ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯೋಗಾವಕಾಶ ಸೃಷ್ಟಿಸುವುದು, ಅಶಕ್ತರಿಗೆ ನೆರವಾಗುವುದು ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶದಿಂದ ಸಂಸ್ಥೆ ಆರಂಭಿಸಲಾಗಿದೆ. ಸಂಸ್ಥೆಯ ಲಾಭಾಂಶದ ಒಂದು ಭಾಗವನ್ನು ಸಮಾಜಸೇವೆಗೆ ಮೀಸಲಿಡುವ ಸಂಕಲ್ಪ ಹೊಂದಿದ್ದೇವೆ ಎಂದು ತಿಳಿಸಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಎ. ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಡಾ. ಭರತ್ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸೇರಿದಂತೆ ಹಲವು ಗಣ್ಯರು ಹಾಗೂ ಸೊಸೈಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ‘ಯಕ್ಷ-ಗಾನ-ನಾದ ವೈಕುಂಠ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಗುರುಪ್ರಸಾದ್ ಬೋಳಿ ಕಾರ್ಯಕ್ರಮ ನಿರೂಪಿಸಿದರು.

