ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪುನಃಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಪುಣ್ಯಾಹವಾಚನ, ಗಣಯಾಗ, ವಿಶೇಷ ಶಾಂತಿ ಹೋಮ, ಶ್ರೀ ಮಹಾಲಿಂಗೇಶ್ವರ ದೇವರಿಗೆ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ನ್ಯಾಸಪೂಜೆ, ಮಹಾಪೂಜೆ, ಅವ ತಬಲಿ, ಪಲಪೂಜೆ, ಅನ್ನಸಂತರ್ಪಣೆ, ರಂಗಪೂಜೆ, ಉತ್ಸವವು ಪಾಡಿಗಾರ ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ನಡೆಯಿತು.
ದೇವಸ್ಥಾನ ದ್ವಾರದಲ್ಲಿ ಮಹಿಳೆಯರಿಗೆ ಅರಸಿನ, ಕುಂಕುಮ ನೀಡಿ ಸ್ವಾಗತಿಸಲಾಯಿತು. 30 ಸಾವಿರಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದರು. ಮಹಿಳೆ, ಪುರುಷ ಸಮವಸ್ತ್ರಧಾರಿ 700 ಸ್ವಯಂಸೇವಕರು ಭಕ್ತರಿಗೆ ಮಾಹಿತಿ ನೀಡಿದರು. ಹಿರಿಯ ನಾಗರಿಕರಿಗೆ ದೇವರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12ರಿಂದಲೇ ಅನ್ನಪ್ರಸಾದ ವಿತರಣೆ ಆರಂಭಗೊಂಡು ರಾತ್ರಿ 8ರ ವರೆಗೆ ನಡೆಯಿತು. ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಕಲಾಭಿಷೇಕ ನಡೆದ ತಾಮ್ರ ಮತ್ತು ರಜತ ಕಲಶವನ್ನು ಭಕ್ತರು ಸೇವಾರೂಪವಾಗಿ ಪಡೆದರು. ಬೆಂಗಳೂರಿನಿಂದ ತರಿಸಲಾದ 3 ಲಕ್ಷ ರೂ.ಗೂ ಮಿಕ್ಕಿದ ಹೂವಿನಿಂದ ದೇವಸ್ಥಾನದ ಒಳಾಂಗಣ, ಹೊರಾಂಗಣವನ್ನು ಅಲಂಕಾರ ಮಾಡಲಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಯೋಲಿನ್ ವಾದನ, ಸಂಗೀತ ರಸಮಂಜರಿ, ಏಕಾದಶಾ ವೀಣಾವಾದನ, ಸನಾತನ ರಾಷ್ಟ್ರಾಂಜಲಿ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಹೊರಭಾಗದಲ್ಲಿ ಸುಮಾರು 20 ಅಡಿ ಎತ್ತರದ ಕೈಲಾಸ ಪರ್ವತ, ಅದರಲ್ಲಿ ಬೃಹತ್ ಗಾತ್ರದ ಗಂಗಾವತಾರ ಈಶ್ವರನ ಮೂರ್ತಿಯನ್ನು ಪರ್ಕಳದ ಪಾಂಡುರಂಗ ಪ್ರಭು ನಿರ್ಮಿಸಿದ್ದು ಜನಾಕರ್ಷಣೆ ಪಡೆದಿದೆ. ಎದುರಿನ ಶಿವಲಿಂಗವೂ ಗಮನ ಸೆಳೆದಿದೆ.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀನಿವಾಸ ಉಪಾಧ್ಯಾಯ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಬಿ. ಜಯರಾಜ್ ಹೆಗ್ಡೆ ಕಾರ್ಯಾಧ್ಯಕ್ಷ ದಿನಕರ ಶೆಟ್ಟಿ ಹೆರ್ಗ, ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ, ಕೋಶಾಧಿಕಾರಿ ಸುಮಿತಾ ನಾಯಕ್, ಜೀರ್ಣೋದ್ದಾರ, ವ್ಯವಸ್ಥಾಪನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

