ಉಡುಪಿ: ಕಾಪು ತಾಲೂಕಿನ ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಬೆಳ್ಳೆಯಲ್ಲಿ ಖಾಸಗಿ ಬ್ಯಾಂಕ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ಮಿಸಿ ಬೆಳ್ಳೆ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದ್ದ ಗ್ರಾಮೀಣ ಗ್ರಂಥಾಲಯ ಇದೀಗ ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯತ್ತ ಸಾಗುತ್ತಿದೆ.

ಗ್ರಾಮೀಣ ಭಾಗದ ಜನರಿಗೆ ಓದು ಹಾಗೂ ಜ್ಞಾನಾರ್ಜನೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದಾನಿಗಳ ನೆರವಿನಿಂದ ಸುಸಜ್ಜಿತವಾಗಿ ನಿರ್ಮಿಸಲಾಗಿದ್ದ ಗ್ರಂಥಾಲಯದ ಸುತ್ತಮುತ್ತ ಹಾಗೂ ಒಳಭಾಗದಲ್ಲಿ ಅಲ್ಲಲ್ಲಿ ಕಸ ಬಿದ್ದಿದ್ದು, ಸ್ವಚ್ಛತೆಯ ಕೊರತೆ ಕಂಡುಬರುತ್ತಿದೆ. ಗ್ರಾಮಸ್ಥರು ಹಾಗೂ ಓದುಗರು ಗ್ರಂಥಾಲಯವನ್ನು ನಿಯಮಿತವಾಗಿ ಸ್ವಚ್ಛವಾಗಿಟ್ಟುಕೊಂಡು, ಅಗತ್ಯ ನಿರ್ವಹಣೆ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿಯನ್ನು ಒತ್ತಾಯಿಸಿದ್ದಾರೆ.

ದಾನಿಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ ನಿರ್ಮಾಣಗೊಂಡಿರುವ ಈ ಗ್ರಂಥಾಲಯವನ್ನು ನಿರ್ಲಕ್ಷಿಸದೆ, ಸ್ವಚ್ಛತೆ ಮತ್ತು ನಿರ್ವಹಣೆಗೆ ಆದ್ಯತೆ ನೀಡಿ ಗ್ರಾಮಸ್ಥರಿಗೆ ಸಮರ್ಪಕವಾಗಿ ಬಳಕೆಯಾಗುವಂತೆ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.