ಉಡುಪಿ: ಜಿಲ್ಲೆಯಾದ್ಯಂತ ಈ ಬಾರಿ ಉತ್ತಮ ಮಳೆಯಾಗಿದ್ದು ಸದ್ಯ ಮುಂಗಾರು ಬಿರುಸು ಕಡಿಮೆಯಾಗಿದೆ.ಮೇ ತಿಂಗಳು ಮತ್ತು ಜೂನ್ ನಲ್ಲಿ ಬಂದ ಮಳೆಯಿಂದಾಗಿ ಬಹುತೇಕ ನದಿ , ಹಳ್ಳಗಳು ಭರ್ತಿಯಾಗಿದ್ದವು.

ಭತ್ತದ ಗದ್ದೆಗಳಲ್ಲೂ ನೀರು ನಿಂತಿತ್ತು.ಇದೀಗ ಮುಂಗಾರು ಮಳೆ ಬಿರುಸು ಕಡಿಮೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ಕೃಷಿ ಕಾರ್ಯ ಚುರುಕುಗೊಂಡಿದೆ. ಮುಂಗಾರು ಮಳೆ ಒಂದು ಹಂತದಲ್ಲಿ ಸ್ಥಿರಗೊಳ್ಳುತ್ತಿದ್ದಂತೆ ಕೃಷಿಕರು ಬೀಜ ಬಿತ್ತನೆ ಪ್ರಕ್ರಿಯೆ ಆರಂಭಿಸಿದ್ದಾರೆ.

ಕಟಪಾಡಿ , ಹೆಬ್ರಿ , ಬ್ರಹ್ಮಾವರ , ಕುಂದಾಪುರ , ಉಡುಪಿ ಸಹಿತ ಹಲವೆಡೆ ಭತ್ತದ ಕೃಷಿ ಕಾರ್ಯ ಪ್ರಾರಂಭಗೊಂಡಿದೆ. ಕರಾವಳಿಯಲ್ಲಿ ಕೂಲಿ ಕಾರ್ಮಿಕರ ಕೊರತೆ ಇಂದು ನಿನ್ನೆಯದಲ್ಲ. ಈ ಸಮಸ್ಯೆಯಿಂದ ಬಹುತೇಕ ರೈತರು ಚಾಪೆ ನೇಜಿಯತ್ತ ಹೆಚ್ಚಿನ ಗಮನ ಹರಿಸಿದ್ದು, ಚಾಪೆ ನೇಜಿ ಮಾದರಿಯಲ್ಲಿ ಭತ್ತದ ಬೀಜವನ್ನು ಬಿತ್ತನೆ ಮಾಡುತ್ತಿದ್ದಾರೆ. ಟ್ರ್ಯಾಕ್ಟ‌ರ್ ಮೂಲಕ ಉಳುಮೆ ಮಾಡಿ ನಾಟಿಗೆ ಸಿದ್ಧತೆ ನಡೆಸಿದ್ದಾರೆ.

ಜಿಲ್ಲೆಯ ಬಹುತೇಕ ಕಡೆ ರೈತರು ಯಾಂತ್ರೀಕೃತ ಕೃಷಿಗೆ ಆಸಕ್ತಿ ವಹಿಸಿದ್ದಾರೆ. ಯಂತ್ರದ ಲಭ್ಯತೆ ಅವಲಂಬಿಸಿ ಕೃಷಿ ಕಾರ್ಯ ನಡೆಸಲು ರೈತರು ಮುಂದಾಗಿದ್ದು, ಈಗಾಗಲೇ ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.