ಉಡುಪಿ: ನಗರದ ತ್ರಿವೇಣಿ ಸರ್ಕಲ್ ಸಮೀಪ ಬೈಕ್ನಲ್ಲಿ ಎಣ್ಣೆಯ ಕ್ಯಾನ್ ಸಾಗಿಸುತ್ತಿದ್ದ ವೇಳೆ ಅದು ಆಯತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಎಣ್ಣೆ ರಸ್ತೆ ಮೇಲೆ ಸೋರಿಕೆಯಾಗಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಎಣ್ಣೆ ಸೋರಿಕೆಯಿಂದ ರಸ್ತೆ ಜಾರುವಂತಾಗಿದ್ದು, ಕೆಲವು ಬೈಕ್ ಸವಾರರು ನಿಯಂತ್ರಣ ತಪ್ಪಿ ಎಡವಿ ಬಿದ್ದ ಘಟನೆಗಳೂ ನಡೆದವು. ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿತ್ತು. ಸ್ಥಳೀಯ ನಿವಾಸಿ ಪ್ರಸನ್ನ ಭಟ್ ಅವರು ಪರಿಸ್ಥಿತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಗಮನಕ್ಕೆ ತಂದರು.
ತಕ್ಷಣ ಸ್ಥಳಕ್ಕೆ ಆಗಮಿಸಿದ ಒಳಕಾಡು, ಎಣ್ಣೆ ಸೋರಿಕೆಯಾದ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳ ಸಂಚಾರವನ್ನು ಸುರಕ್ಷಿತವಾಗಿ ನಿರ್ವಹಿಸುವ ವ್ಯವಸ್ಥೆ ಮಾಡಿದರು. ಅಲ್ಲದೆ, ಘಟನೆಯ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ಮಾಹಿತಿ ನೀಡಿದರು.
ಬಳಿಕ ಆರೋಗ್ಯ ನಿರೀಕ್ಷಕ ಸತೀಶ್ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿ ನೀರಿನ ಟ್ಯಾಂಕರ್ನ್ನು ಸ್ಥಳಕ್ಕೆ ತರಿಸಿ ರಸ್ತೆ ಸ್ವಚ್ಛಗೊಳಿಸಿದರು. ನಗರಸಭೆಯ ತ್ವರಿತ ಕ್ರಮದಿಂದ ಸಂಭವಿಸಬಹುದಾಗಿದ್ದ ಅನಾಹುತವೊಂದು ತಪ್ಪಿದಂತಾಗಿದೆ.

