ಉಡುಪಿ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರ ದಟ್ಟಣೆ ಹೆಚ್ಚಿದ್ದ ಸಂದರ್ಭವನ್ನು ಬಳಸಿಕೊಂಡು ಮಹಿಳೆಯೊಬ್ಬರ ಮಾಂಗಲ್ಯ ಸರ ಕಳವು ಮಾಡಿದ ಘಟನೆ ಬ್ರಹ್ಮಾವರ ತಾಲ್ಲೂಕಿನ ಕೋಟ ವ್ಯಾಪ್ತಿಯ ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ನಡೆದಿದೆ.

ಗಣೇಶ ಚತುರ್ಥಿ ಪ್ರಯುಕ್ತ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಈ ಜನಜಂಗುಳಿಯನ್ನೇ ಬಂಡವಾಳ ಮಾಡಿಕೊಂಡ ಕಳ್ಳಿಯರು, ದೇವಳದ ಗರ್ಭಗುಡಿ ಪಕ್ಕದಲ್ಲಿ ತೀರ್ಥ ಸ್ವೀಕರಿಸುತ್ತಿದ್ದ ಭಕ್ತರೊಬ್ಬರ ಮಾಂಗಲ್ಯ ಸರವನ್ನು ಎಗರಿಸಿರುವುದಾಗಿ ತಿಳಿದುಬಂದಿದೆ.

ಕಳ್ಳತನದ ಕೃತ್ಯ ದೇವಾಲಯದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೃತ್ಯದಲ್ಲಿ ಮೂವರು ಮಹಿಳೆಯರು ಭಾಗಿಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಘಟನೆ ಕುರಿತು ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿ ಕ್ಯಾಮೆರಾ ದೃಶ್ಯಗಳ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.