ಉಡುಪಿ: ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಸಮೀಪ ಏಪ್ರಿಲ್ 24ರಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರೇರಣಾ ಮೂಲ್ಯ ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 27ರಂದು ನಿಧನ ಹೊಂದಿದ್ದಾರೆ.
ಇದೇ ಅಪಘಾತದಲ್ಲಿ ಒಂದೇ ಕುಟುಂಬದ ಇಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ. ಸಿಇಟಿ ಪರೀಕ್ಷೆ ಬರೆದು ತಂದೆ ನವೀನ್‌ಂದ್ರ ಅವರೊಂದಿಗೆ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ, ಕಾರ್ಕಳದಿಂದ ನಿಟ್ಟೆ ಕಡೆಗೆ ಬರುತ್ತಿದ್ದ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿತ್ತು.
ಡಿಕ್ಕಿಯ ತೀವ್ರತೆಗೆ ಬೈಕ್ ಎಸೆಯಲ್ಪಟ್ಟು, ನವೀನ್‌ಚಂದ್ರ ಹಾಗೂ ಪ್ರೇರಣಾ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯ ದಿನವೇ ನವೀನ್‌ಚಂದ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರೇರಣಾ ಅವರು ಸೋಮವಾರ ಸಾವನ್ನಪ್ಪಿದ್ದಾರೆ.
ತಂದೆ-ಏಕೈಕ ಮಗಳ ಸಾವಿನಿಂದ ಕುಟುಂಬವು ಶೋಕ ಸಾಗರದಲ್ಲಿ ಮುಳುಗಿದೆ. ಸ್ಥಳೀಯರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

