ಉಡುಪಿ: ರಾಷ್ಟ್ರಕವಿ ಗೋವಿಂದ ಪೈಗಳ ಸಂಶೋಧನೆ, ಬರಹಗಳು ಅಧ್ಯಯನಶೀಲರಿಗೆ ಪ್ರೇರಣೆ. ಅಧಿಕೃತ ಮತ್ತು ಮೂಲ ಆಕರಗಳನ್ನು ಇಟ್ಟುಕೊಂಡು ಬರೆದ ಅಪರೂಪದ ಸಾಹಿತಿ. ಸೃಜನಾತ್ಮಕ ಕ್ಷೇತ್ರಕ್ಕೂ ಗೋವಿಂದ ಪೈಗಳ ಕೊಡುಗೆ ದೊಡ್ಡದು. ಅವರು ಬರೆದ ದ್ರಾವಿಡ ಲಯದ ಹಾಡುಗಳು ಸಾಹಿತ್ಯದ ಮೈಲಿಗಲ್ಲು ಎಂದು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಹೇಳಿದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ನಡೆದ “ಗೋವಿಂದ ಪೈ ಸಂಶೋಧನ ಸಂಪುಟ” ಪರಿಷ್ಕೃತ ದ್ವಿತೀಯ ಮುದ್ರಣ ಭಾಗ-2ರ ಅನಾವರಣ ಸಮಾರಂಭದಲ್ಲಿ “ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ” ಸ್ವೀಕರಿಸಿ ಮಾತನಾಡಿದರು.

ಸಂಶೋಧನೆಯ ಜೊತೆಗೆ ಕಾವ್ಯದ ಸರ್ವ ಸ್ವಾರಸ್ಯವನ್ನು ಜೀರ್ಣಿಸಿಕೊಂಡು ಬರೆದವರು ಗೋವಿಂದ ಪೈಗಳು, ಓರ್ವ ತಪಸ್ವಿಯಂತೆ, ಋಷಿಯಂತೆ ಜೀವನ ನಡೆಸಿದರು ಎಂದು ಹೇಳಿದರಲ್ಲದೆ, ತನಗೆ ಅವರ ಹೆಸರಿನ ಪ್ರಶಸ್ತಿ ನೀಡಿದ ಬಗ್ಗೆ ಹೆಮ್ಮೆ ಮತ್ತು ಸಂತೋಷ ವ್ಯಕ್ತಪಡಿಸಿದರು.

ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅವರು, ‘ಗೋವಿಂದ ಪೈ ಸಂಶೋಧನ ಸಂಪುಟ” ಪರಿಷ್ಕೃತ ದ್ವಿತೀಯ ಮುದ್ರಣ ಭಾಗ-2ರ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ರಾಷ್ಟ್ರಕವಿ ಗೋವಿಂದ‌‌‌ ಪೈ ಸಂಶೋಧನಾ ಕೇಂದ್ರದ ಸಲಹಾ ಸಮಿತಿಯ ಅಧ್ಯಕ್ಷ ಡಾ. ಬಿ.ಎ ವಿವೇಕ್ ರೈ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ವಿವಿಯ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ್ ಕುಮಾರ್ ಅಭಿನಂದನಾ ಭಾಷಣ ಮಾಡಿದರು.

ವೇದಿಕೆಯಲ್ಲಿ ಮಾಹೆ ಕುಲಪತಿ ಡಾ.ಎಂ.ಡಿ. ವೆಂಕಟೇಶ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕೃತಿಯ ಸಂಪಾದಕರುಗಳಾದ ಪ್ರೊ. ಮುರಳೀಧರ ಉಪಾಧ್ಯ ಹಾಗೂ ಡಾ.ಪಾದೇಕಲ್ಲು ವಿಷ್ಣು ಭಟ್ಟ ಉಪಸ್ಥಿತರಿದ್ದರು.

ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಆರ್‌ಆರ್‌ಸಿಯ ಸಹಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್ ಕಾರ್ಯಕ್ರಮ ನಿರೂಪಿಸಿದರು.