ಉಡುಪಿ: ಕರಾವಳಿಯ ಪ್ರಕೃತಿ ಆರಾಧನೆಯ ಪ್ರತೀಕವಾಗಿರುವ ನಾಗದೇವರ ಕಲ್ಪನೆಯೊಂದಿಗೆ, ‘Save Nature’ ಸಂದೇಶ ಸಾರುವ ‘ನಾಗಬನ’ ಎಂಬ ವಿಶೇಷ ಮರಳು ಶಿಲ್ಪ ಕೋಟೇಶ್ವರದ ಹಳೆ ಅಳಿವೆ ಕಡಲ ಕಿನಾರೆಯಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಭಯ, ಭಕ್ತಿ ಮತ್ತು ಶ್ರದ್ಧೆಯೊಂದಿಗೆ ಕರಾವಳಿಯಲ್ಲಿ ಆರಾಧಿಸಲ್ಪಡುವ ನಾಗದೇವರ ಪರಿಕಲ್ಪನೆಯನ್ನು ಆಧರಿಸಿ ಈ ಕಲಾಕೃತಿಯನ್ನು ರೂಪಿಸಲಾಗಿದೆ. ಪ್ರಕೃತಿ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಕಲಾಕೃತಿಗೆ ‘ನಾಗಬನ’ ಎಂಬ ಶೀರ್ಷಿಕೆ ನೀಡಲಾಗಿದೆ.
ಕುಂದಾಪುರದ ತ್ರಿವರ್ಣ ಆರ್ಟ್ ಕ್ಲಾಸಸ್ನ ಕಲಾವಿದ್ಯಾರ್ಥಿಗಳಾದ ಅದ್ವಿತ್ ಶಂಕರ್, ಸಾತ್ವಿಕ್ ಕೆ.ಆರ್., ಪ್ರಣತಿ ಪ್ರಶಾಂತ್ ಭಟ್, ಸಮನ್ವಿ, ಅದ್ವಿತ್ ಕುಮಾರ್ ಆರ್., ಸುನೇರಿ ಹೆಗ್ಡೆ ಹಾಗೂ ವಿದ್ಯಾ ರಾಣಿ ಅವರು ಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗಾ ಅವರ ತರಬೇತಿ ಮತ್ತು ಮಾರ್ಗದರ್ಶನದಲ್ಲಿ ಸುಮಾರು 12 ಅಡಿ ಅಗಲದ ವಿಸ್ತೀರ್ಣದಲ್ಲಿ ಈ ಮರಳು ಶಿಲ್ಪವನ್ನು ನಿರ್ಮಿಸಿದ್ದಾರೆ.
ನಾಗಾರಾಧನೆಯೊಂದಿಗೆ ಪ್ರಕೃತಿಯ ಸಂರಕ್ಷಣೆಯ ಸಂದೇಶವನ್ನು ಕಲಾತ್ಮಕವಾಗಿ ಬಿಂಬಿಸಿರುವ ಈ ಮರಳು ಶಿಲ್ಪವು ಕಡಲ ಕಿನಾರೆಯ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಿದೆ.

