ಉಡುಪಿ: ಪುಟ್ಟ ಮಕ್ಕಳ ಕೃಷ್ಣವೇಷ, ಅವರ ಮುಗ್ಧ ನಗು, ತುಂಟಾಟ ಮತ್ತು ಹೆಜ್ಜೆಗಳಿಗೆ ಸಾಕ್ಷಿಯಾದ ಜೂನಿಯರ್ ಮುದ್ದುಕೃಷ್ಣ ಸ್ಪರ್ಧೆ ಉಡುಪಿ ಶ್ರೀಕೃಷ್ಣ ಮಠದ ಅನ್ನಬ್ರಹ್ಮ ಛತ್ರದಲ್ಲಿ ಶುಕ್ರವಾರ ವಿಶೇಷ ಸಂಭ್ರಮ ಮೂಡಿಸಿತು.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿವಿಧ ವಯೋಮಾನದ ಮಕ್ಕಳು ಮುದ್ದುಕೃಷ್ಣನ ವೇಷ ಧರಿಸಿ ಭಾಗವಹಿಸಿದ್ದರು. ಬಾಲಕೃಷ್ಣನ ಉಡುಪು, ನವಿಲು ಗರಿಯ ಕಿರೀಟ, ಕೊಳಲು ಹಾಗೂ ವಿವಿಧ ಆಭರಣಗಳಿಂದ ಸಿಂಗಾರಗೊಂಡ ಪುಟಾಣಿಗಳು ನೆರೆದವರ ಮನಗೆದ್ದರು.
ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಮಕ್ಕಳ ಲೀಲೋತ್ಸವವನ್ನು ವೀಕ್ಷಿಸಿ ಸಂತಸಗೊಂಡರು. ಪುಟ್ಟ ಮಕ್ಕಳ ಕೃಷ್ಣವೇಷ ಹಾಗೂ ಅವರ ಮುಗ್ಧ ಅಭಿನಯವನ್ನು ಕಣ್ತುಂಬಿಕೊಂಡ ಶ್ರೀಗಳು, ಮಕ್ಕಳೊಂದಿಗೆ ಕೆಲಕಾಲ ಆತ್ಮೀಯವಾಗಿ ಬೆರೆತರು.
ಅನ್ನಬ್ರಹ್ಮ ಛತ್ರದಲ್ಲಿ ನಡೆದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಮಕ್ಕಳ ಸಂಭ್ರಮದೊಂದಿಗೆ ಪಾಲಕರಲ್ಲೂ ಸಂತಸ ಮನೆ ಮಾಡಿತ್ತು. ಕೃಷ್ಣನೂರಿನಲ್ಲಿ ಜನ್ಮಾಷ್ಟಮಿ ಆಚರಣೆಯ ಸಂಭ್ರಮದ ನಡುವೆ ಮುದ್ದುಕೃಷ್ಣರ ಲೀಲೋತ್ಸವ ವಿಶೇಷ ಆಕರ್ಷಣೆಯಾಗಿ ಮೂಡಿಬಂತು.

