ಉಡುಪಿ: ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಇಂದ್ರಾಳಿ ರೈಲ್ವೆ ಬ್ರಿಡ್ಜ್ ಕಾಮಗಾರಿ ಪರಿಶೀಲಿಸಿದರು. ಕಾಮಗಾರಿ ವಿಳಂಬದ ಕಾರಣಕ್ಕಾಗಿ ಸಾರ್ವಜನಿಕ ಆಕ್ಷೇಪಕ್ಕೆ ಕಾರಣವಾಗಿದೆ. ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದನ್ನು ಖಂಡಿಸಿ ಕೆಲ ಸಾಮಾಜಿಕ ಸಂಘಟನೆಗಳು ಏಪ್ರಿಲ್ ಒಂದರಂದು ಏಪ್ರಿಲ್ ಫೂಲ್ ಆಚರಣೆಯ ಮೂಲಕ ಪ್ರತಿಭಟಿಸಲು ಮುಂದಾಗಿದ್ದವು.
ಈ ನಿಟ್ಟಿನಲ್ಲಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿದರು. ಈಗಾಗಲೇ ಎಂಟು ಒಂಬತ್ತು ಬಾರಿ ಸ್ಥಳಕ್ಕೆ ಭೇಟಿ ಕೊಟ್ಟು ನಾನು ಪರಿಶೀಲನೆ ನಡೆಸಿದ್ದೇನೆ. ನಾನು ಸಂಸದನಾದ ಬಳಿಕ ಕಾಮಗಾರಿ ವೇಗ ಪಡೆದುಕೊಂಡಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಿದರೆ ತೊಂದರೆ ಇಲ್ಲ, ಆದರೆ ಪ್ರತಿಭಟನೆಯ ನೆಪದಲ್ಲಿ ಸತ್ಯಕ್ಕೆ ಅಪಚಾರ ಆಗಬಾರದು.
ಈ ರೀತಿ ಮಾಡುವುದು ಕಾಂಗ್ರೆಸ್ ನಾಯಕರಿಗೆ ಶೋಭೆಯಲ್ಲ. ಕಾಮಗಾರಿ ಮುಗಿಯುವ ಹಂತದಲ್ಲಿ ಏಪ್ರಿಲ್ ಫೂಲ್ ಎಂದು ಅಣಕವಾಡಿ ಪ್ರತಿಭಟಿಸುವ ಮೂಲಕ ಇದರ ಲಾಭ ಪಡೆಯಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಕಿಡಿಕಾರಿದರು. ಕಾಮಗಾರಿ ಆರಂಭಿಸಿ ಎಂಟು ಒಂಬತ್ತು ವರ್ಷಗಳಾಗಿರಬಹುದು. ನಾನು ಸಂಸದನಾಗಿ 9 ತಿಂಗಳಲ್ಲಿ ಸೇತುವೆ ಕಾಮಗಾರಿ ಮುಗಿಸಲು ವಿಶೇಷ ಪ್ರಯತ್ನ ಮಾಡುತ್ತಾ ಬಂದಿದ್ದೇನೆ.
ಗರ್ಡರ್ ಅಳವಡಿಕೆ, ಗಾರ್ಡರ್ ವೆಲ್ಡಿಂಗ್ ಕಾಮಗಾರಿ ಚಾಲ್ತಿಯಲ್ಲಿದೆ. ಕಾಮಗಾರಿ ವಿಳಂಬವಾದ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಹಾಗೂ ಗುತ್ತಿಗೆದಾರನನ್ನು ಪೊಲೀಸ್ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿರುವುದು ನನ್ನ ಸಾರ್ವಜನಿಕ ಜೀವನದಲ್ಲಿ ಇದೇ ಮೊದಲ ಬಾರಿಗೆ ಕಂಡಿದ್ದೇನೆ. ಗರ್ಡರ್ ಈಗ ಸಂಪೂರ್ಣ ಸಿದ್ಧವಾಗಿದೆ, ಕೊಂಕಣ ರೈಲ್ವೆಯಲ್ಲಿ ಕ್ರಿಬ್ಸ್ ಗಳ ವ್ಯವಸ್ಥೆ ಇರಲಿಲ್ಲ.
ಹುಬ್ಬಳ್ಳಿಯ ನೈರುತ್ಯ ರೈಲ್ವೆ ಮೂಲಕ ಅದನ್ನು ತರಿಸಿಕೊಂಡು ಕಾಮಗಾರಿ ಮಾಡುತ್ತಿದ್ದೇವೆ. ಲಕ್ನೋದ ಉನ್ನತ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ ಬಳಿಕ ಕಾಮಗಾರಿ ಪೂರ್ಣಗೊಳ್ಳಲಿದೆ. ಉಡುಪಿಯ ಜನತೆ ವಾಸ್ತವವನ್ನು ಅರಿತುಕೊಳ್ಳಬೇಕು. ಸತ್ಯವನ್ನು ಮರೆಮಾಚಿ ಪ್ರತಿಭಟನಾಕಾರರು ಜನತೆಯನ್ನು ಏಪ್ರಿಲ್ ಫೂಲ್ ಮಾಡಬೇಡಿ ಎಂದರು.

