ಉಡುಪಿ: ರಾಜ್ಯದಲ್ಲಿ ಗಣತಿ ವಿಳಂಬ ವಿಚಾರವಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಜಾತಿಗಣತಿ ಮಾಡುವುದಾಗಿ ಘೋಷಿಸಿದೆ. ಸಿದ್ದರಾಮಯ್ಯ ಅದರ ಮಧ್ಯದಲ್ಲಿ ನಾವು ಮಾಡುತ್ತೇವೆ ಎಂದು ಹೊರಟಿದ್ದಾರೆ.
ಮತ್ತಷ್ಟು ಸಮಸ್ಯೆಗಳನ್ನು ಯಾಕೆ ಸೃಷ್ಟಿ ಮಾಡುತ್ತಿರುವ ಗೊತ್ತಿಲ್ಲ. ನೀವು ಬಿಜೆಪಿಯನ್ನು ದೂರುತ್ತೀರಿ. ಸಚಿವ ಸಂಪುಟದಲ್ಲಿ ಆಗುವ ಗಲಾಟೆಗೆ ಬಿಜೆಪಿ ಕಾರಣನಾ?, ಸರ್ಕಾರವಾಗಿ ನಿಮ್ಮಲ್ಲಿ ಜಾತಿಗಣತಿ ಬಗ್ಗೆ ಏಕ ಅಭಿಪ್ರಾಯ ಇದೆಯಾ?. ನ್ಯಾಯಾಲಯ ಜಾತಿಗಣತಿಗೆ ಯಾರನ್ನು ಒತ್ತಾಯ ಮಾಡುವಂತಿಲ್ಲ ಎಂದು ಹೇಳಿದೆ ಎಂದರು.
ಕಾಂತರಾಜ್ ವರದಿಗೆ 175 ಕೋಟಿ ರೂಪಾಯಿವರೆಗೆ ಖರ್ಚಾಗಿದೆ. ನಿಮ್ಮ ಹೈಕಮಾಂಡ್ ಕಾಂತರಾಜ್ ವರದಿ ಬೇಡ ಎಂದು ಹೇಳಿತು. ಈಗ ಮತ್ತೆ 200-300 ಕೋಟಿ ರೂಪಾಯಿ ಯೋಜನೆ ಹಾಕಿದ್ದೀರಿ. ರಾಜ್ಯದಲ್ಲಿ ಶಿಕ್ಷಕರ ಪರಿಸ್ಥಿತಿ ಏನಾಗಿದೆ ಗೊತ್ತಾ. ಸರ್ಕಾರಿ ಸಿಬ್ಬಂದಿಗಳು ಕೆಲಸ ಮಾಡಬೇಕು ನಿಜ ಎಂದರು.
ಅನಾರೋಗ್ಯ ಪೀಡಿತರು 57 58 ವರ್ಷ ಮೀರಿದವರು ಒದ್ದಾಡುತ್ತಿದ್ದಾರೆ, ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತೀರಿ. ಹಳೆ ಪಿಂಚಣಿ ಕೊಡುತ್ತೇವೆ ಎಂದು ಹೇಳಿ ವೋಟ್ ತಗೊಂಡ್ರಿ, ಈಗ ಬದುಕಲು ನೀವು ಬಿಡುತ್ತಿಲ್ಲ. ಸರಕಾರಿ ನೌಕರರಿಗೆ ಇದರಿಂದ ಸಮಸ್ಯೆ ಉಂಟಾಗಿದೆ ಎಂದರು.
ಶೇಕಡ 100 ಜಾತಿಗಣತಿ ಆಗುತ್ತೆ ಅನ್ನೋ ವಿಶ್ವಾಸ ನಿಮಗೆ ಇಲ್ಲ. ಉಪಮುಖ್ಯಮಂತ್ರಿಗಳು ಏನು ಹೇಳಿದರು ಎಲ್ಲರೂ ನೋಡಿದ್ದಾರೆ. ಸಚಿವ ಸಂಪುಟದ ಸದಸ್ಯರು ಸಮುದಾಯ ಮುಖಂಡರು ಮಾತನಾಡಿದ್ದನ್ನು ಕೇಳಿದ್ದೇವೆ. ರಾಜ್ಯದಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ. ಈ ವ್ಯರ್ಥ ಪ್ರಯತ್ನ ಯಾಕೆ?, ಹಿಂದುಳಿದ ವರ್ಗದ ಸಾವಿರಾರು ಮಕ್ಕಳಿಗೆ ಈಗ ಹಾಸ್ಟೆಲ್ ಸಿಗುತ್ತಿಲ್ಲ ಎಂದರು.
ಹಿಂದುಳಿದ ವರ್ಗದವರಿಗೆ ದುರ್ಬಲರಿಗೆ ನೆರವಾಗಬೇಕಾದ ಸರಕಾರ ಜಾತಿ ಗಣತಿ ಹೆಸರಲ್ಲಿ ಗೊಂದಲ ಮಾಡುತ್ತಿದೆ. 15 ಬಾರಿ ಬಜೆಟ್ ಮಂಡನೆ ಮಾಡಿದ ನೀವು ಈ ಕೆಲಸ ಮಾಡಬಾರದಿತ್ತು. ಕಾಂತರಾಜ್ ವರದಿ ಬೇಡ ಎಂದು ಹೈಕಮಾಂಡ್ ಹೇಳಿರುವುದನ್ನು ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಅದಕ್ಕಾಗಿ ಹೊಸ ಆಯೋಗ ರಚನೆಯಾಗಿದೆ ಎಂದರು.
ರಾಜ್ಯದಲ್ಲಿ ನವಂಬರ್ ಕ್ರಾಂತಿ ವಿಚಾರವಾಗಿ ಮಾತನಾಡಿ ಏನು ಕ್ರಾಂತಿಯಾಗುತ್ತೋ ಗೊತ್ತಿಲ್ಲ ಸರಕಾರ ಸಂಪೂರ್ಣ ಸ್ಥಗಿತವಾಗಿದೆ. ಉಪಮುಖ್ಯಮಂತ್ರಿಯ ಮುಂದುವರೆಯುತ್ತಾರೋ ಇಲ್ಲವೋ ಹೊಸ ಮುಖ್ಯಮಂತ್ರಿ ಬರ್ತಾರೋ ಏನೋ ಎಂಬ ಗೊಂದಲ ಇದೆ. ಈ ಗೊಂದಲ ಇದ್ದಾಗ ಸರ್ಕಾರಿ ಕೆಲಸಗಳು ಸ್ಥಗಿತ ಆಗುತ್ತೆ. ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಗೋದಿಲ್ಲ. ಯಾರು ಕೇಳಿದರು ಜಾತಿಗಣತಿಯಲ್ಲಿ ಇದ್ದೇವೆ ಅಂತಾರೆ ಎಂದರು.
ವಿಎ, ಜಿಲ್ಲಾಧಿಕಾರಿ, ಶಿಕ್ಷಕರು ಎಲ್ಲರೂ ಅದೇ ಮಾತು ಹೇಳುತ್ತಾರೆ. ಅಸ್ಥಿರ ಸರಕಾರ ಇದ್ದಾಗ ಯಾರು ಕೂಡ ಕೆಲಸ ಮಾಡಲ್ಲ, ಮುಂದೆ ನಾಗುತ್ತೋ ನೋಡೋಣ ಈಗಂತೂ ಬಹಳಷ್ಟು ಗೊಂದಲ ಇದೆ ಎಂದರು.

