ಉಡುಪಿ: ಕರ್ನಾಟಕ ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿದೆ. ಕೇರಳ ಪ್ರವೇಶಿಸಿದ್ದ ಮುಂಗಾರು ಇದೀಗ ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಅಬ್ಬರಿಸಲು ಆರಂಭಿಸಿದೆ. ಕಳೆದ 24 ಗಂಟೆಗಳಿಂದ ಸುರಿಯುತ್ತಿರುವ ಮಳೆಯಿಂದ ಕರಾವಳಿಯಲ್ಲಿ ಸಂಪೂರ್ಣ ಮಳೆಮಯ ವಾತಾವರಣ ನಿರ್ಮಾಣವಾಗಿದೆ. ಉಡುಪಿ ಜಿಲ್ಲೆಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.

ಕರಾವಳಿಯಲ್ಲಿ ಮುಂಗಾರಿನ ಛಾಯೆ ಮತ್ತಷ್ಟು ಗಟ್ಟಿಯಾಗುತ್ತಿದೆ. ವಿಳಂಬವಾಗಿ ಕರಾವಳಿಗೆ ಕಾಲಿಟ್ಟ ಮುಂಗಾರು ಇದೀಗ ತನ್ನ ನಿಜವಾದ ಅಬ್ಬರ ತೋರಿಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಿಂದ ಮೋಡ ಕವಿದ ವಾತಾವರಣದ ನಡುವೆ ನಿರಂತರ ಮಳೆಯಾಗುತ್ತಿದೆ.

ರಸ್ತೆಗಳು ತೇವಗೊಂಡಿದ್ದು, ನದಿಗಳು ಮತ್ತು ಹೊಳೆಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಮುಂಗಾರು ಚುರುಕುಗೊಳ್ಳುತ್ತಿದ್ದಂತೆ ಜನಜೀವನವೂ ನಿಧಾನವಾಗಿ ಮಳೆಯ ಲಯಕ್ಕೆ ಹೊಂದಿಕೊಳ್ಳುತ್ತಿದೆ.ಉಡುಪಿ ಜಿಲ್ಲೆಗೆ ಹವಾಮಾನ ಇಲಾಖೆ ಐದು ದಿನಗಳ ಆರೆಂಜ್ ಅಲರ್ಟ್ ಘೋಷಿಸಿದೆ. ಮುಂದಿನ ನಾಲ್ಕು ರಿಂದ ಐದು ದಿನಗಳ ಕಾಲ ಜಿಲ್ಲೆಯಲ್ಲಿ ನೂರರಿಂದ 150 ಮಿಲಿಮೀಟರ್ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಈ ಬಾರಿ ಸಾಮಾನ್ಯ ಮಳೆಯಷ್ಟೇ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದರೂ, ಆರಂಭಿಕ ಉತ್ತಮ ಮಳೆ ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಉಡುಪಿ ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಮಾಣ ಸುಮಾರು 4,500 ಮಿಲಿಮೀಟರ್. ಆದರೆ ಕಳೆದ ವರ್ಷ ಜಿಲ್ಲೆಯಲ್ಲಿ 5,400 ಮಿಲಿಮೀಟರ್ ಗೂ ಅಧಿಕ ಮಳೆಯಾಗಿ, ವಾಡಿಕೆಗಿಂತ ಸುಮಾರು 900 ಮಿಲಿಮೀಟರ್ ಹೆಚ್ಚು ಮಳೆ ದಾಖಲಾಗಿತ್ತು.

ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಬಹುದು ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದ್ದರೂ, ಸಮಯಕ್ಕೆ ಸರಿಯಾಗಿ ಆರಂಭವಾದ ಮಳೆ ಕೃಷಿ ಚಟುವಟಿಕೆಗಳಿಗೆ ನೆರವಾಗಲಿದೆ ಎಂಬ ವಿಶ್ವಾಸ ರೈತರಲ್ಲಿದೆ. ಭತ್ತದ ನಾಟಿ ಸೇರಿದಂತೆ ಕೃಷಿ ಕಾರ್ಯಗಳಿಗೆ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ.ಇನ್ನೊಂದೆಡೆ, ಸಮುದ್ರದಲ್ಲೂ ಅಲೆಗಳ ಅಬ್ಬರ ಜೋರಾಗಿದೆ.

ಮುಂಗಾರು ಆರಂಭವಾದ ಹಿನ್ನೆಲೆಯಲ್ಲಿ ಆಳಸಮುದ್ರ ಮೀನುಗಾರಿಕೆ ಈಗಾಗಲೇ ಬಂದ್ ಆಗಿದೆ. ಸಾಂಪ್ರದಾಯಿಕ ಮೀನುಗಾರಿಕೆ ಕೂಡ ಇನ್ನಷ್ಟೇ ಆರಂಭವಾಗಬೇಕಿದ್ದು, ಮೀನುಗಾರರು ಹವಾಮಾನ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡ ಹಿನ್ನೆಲೆ ಜಿಲ್ಲಾಡಳಿತ ಕೂಡ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಒಟ್ಟಿನಲ್ಲಿ ಕರಾವಳಿಯಲ್ಲಿ ಮುಂಗಾರು ತನ್ನ ಅಬ್ಬರ ಆರಂಭಿಸಿದ್ದು, ಮುಂದಿನ ಕೆಲವು ದಿನಗಳು ಭಾರೀ ಮಳೆಯ ಸಾಧ್ಯತೆ ಇದೆ. ರೈತರಲ್ಲಿ ಆಶಾಭಾವನೆ ಮೂಡಿದರೆ, ಸಮುದ್ರ ತೀರ ಭಾಗದಲ್ಲಿ ಎಚ್ಚರಿಕೆಯ ವಾತಾವರಣವಿದೆ.