ಉಡುಪಿ: ಮಕ್ಕಳ ಮೊಬೈಲ್ ಗೀಳಿನಿಂದ ಸಮಾಜದಲ್ಲಿ ಅನೇಕ ದುಷ್ಪರಿಣಾಮಗಳು ಆಗುತ್ತಿವೆ. ಈ ನಿಟ್ಟಿನಲ್ಲಿ ಸರಕಾರವು ಮಕ್ಕಳು ಅತಿಯಾಗಿ ಮೊಬೈಲ್ ಬಳಕೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಪುತ್ತಿಗೆ ಮೂಲ ಮಠದಲ್ಲಿ ಮೇ 14ರಿಂದ 18ರ ವರೆಗೆ ಮಕ್ಕಳಿಗೆ ಮೊಬೈಲ್ ವರ್ಜನ ಶಿಬಿರ ಹಮ್ಮಿಕೊಂಡಿದ್ದೇವೆ ಎಂದು ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಹೇಳಿದರು.

ಗೀತಾ ಮಂದಿರದ ಶ್ರೀ ನರಸಿಂಹ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀಪಾದರು ಈ ಬಗ್ಗೆ ಮಾಹಿತಿ ನೀಡಿ, ಮೊಬೈಲ್‌ನಿಂದ ಒಳ್ಳೆಯದೂ ಇದೆ, ದುಷ್ಪರಿಣಾಮವೂ ಇದೆ. ಮೊಬೈಲ್ ಚಟದಿಂದ ಚಿಕ್ಕ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಕುಂಠಿತವಾಗುತ್ತದೆ. ಮೊಬೈಲ್ ಇಲ್ಲ ಎಂದರೆ ಬದುಕೇ ಇಲ್ಲ ಎಂಬಂತೆ ಮಕ್ಕಳು ವರ್ತಿಸುತ್ತಿದ್ದಾರೆ ಮತ್ತು ಮೊಬೈಲ್ ಕೊಡದೆ ಇದ್ದಾಗ ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಮೊಬೈಲ್ ಬಳಕೆ ದುಶ್ಚಟ ಅಥವಾ ದುರ್ವ್ಯಸನ ಆಗದೆ, ಮೊಬೈಲ್ ಬಿಟ್ಟು ಸಹಜವಾದ ಜೀವನ ನಡೆಸಬಹುದು ಎಂಬುದನ್ನು ಕಲಿಸುವ ಶಿಬಿರ ಇದಾಗಿದೆ ಎಂದರು.

6 ರಿಂದ 12 ವರ್ಷದ ವರೆಗಿನ ಮಕ್ಕಳಿಗೆ ವಾಸ್ತವ್ಯದ ಜತೆಗೆ ಈ ಶಿಬಿರ ಇರಲಿದೆ. ದೇಶಿ ಕ್ರೀಡೆಯ ಜತೆಗೆ ವಿವಿಧ ಚಟುವಟಿಕೆ ಮಾಡಿಸಲಾಗುವುದು. ಇದೊಂದು ಪ್ರಾಯೋಗಿಕ ಪ್ರಥಮ ಪ್ರಯತ್ನವಾಗಿದೆ. ಮುಂದೆ ಮಕ್ಕಳ ಪಾಲಕ, ಪೋಷಕರಿಗೂ ಇಂತಹ ಶಿಬಿರ ನಡೆಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಿದ್ದೇವೆ ಎಂದು ಹೇಳಿದರು.

ಶಿಬಿರದ ಉದ್ಘಾಟನೆ ಗೀತಾಮಂದಿರದ ನರಸಿಂಹ ಸಭಾಂಗಣದಲ್ಲಿ ನಡೆಯಲಿದೆ. ಅನಂತರ ಮಕ್ಕಳನ್ನು ಶ್ರೀ ಪುತ್ತಿಗೆ ಮೂಲಮಠಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಶಿಬಿರದಲ್ಲಿ ಭಾಗವಹಿಸುವ ಮಕ್ಕಳ ವಿವರ ಸಹಿತ ಅರ್ಜಿಯನ್ನು ಗೀತಾಮಂದಿರಕ್ಕೆ ಮೇ 10ರೊಳಗೆ ಸಲ್ಲಿಸಬೇಕು. ಮಾಹಿತಿಗಾಗಿ ಗೀತಾ ಮಂದಿರದ ಕಚೇರಿ ಸಂರ್ಕಿಸಬಹುದು ಎಂದರು.