ಉಡುಪಿ: ಅನಂತ್ ಕುಮಾರ್ ಹೆಗಡೆ ರಾಜ್ಯರಾಜಕಾರಣಕ್ಕೆ ಮರಳುವ ವಿಚಾರವಾಗಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಅನಂತ್ ಕುಮಾರ್ ಹೆಗಡೆ ವೈಯಕ್ತಿಕವಾಗಿ ಎಲ್ಲೂ ಪ್ರತಿಕ್ರಿಯೆ ಕೊಟ್ಟಿಲ್ಲ. ಸಾಮಾಜಿಕ ಜಾಲತಾಣದಲ್ಲಿ ದೆಹಲಿಗೆ ಬುಲಾವ್ ಎಂದು ಹೇಳುತ್ತಿದ್ದಾರೆ ಎಂದರು.

ಯಾವುದೇ ದೃಢವಾದ ಮಾಹಿತಿ ಇಲ್ಲ. ರಾಜ್ಯ ರಾಜಕಾರಣಕ್ಕೆ ಬರಲು ಅವರಿಗೆ ಮನಸ್ಸಿದೆಯೋ? ಇಲ್ಲವೋ ಅವರೇ ಬಹಿರಂಗಪಡಿಸಬೇಕು. ಬಿಜೆಪಿಯಲ್ಲಿ ಒಳ್ಳೆಯ ನಾಯಕತ್ವವನ್ನು ಮುಗಿಸುತ್ತಾರೆ ಅಷ್ಟೇ. ತಂದೆ ಮಕ್ಕಳ ಸಹವಾಸದಿಂದ ಹೀಗೆ ಆಗಿದೆ. ಇಂಥವರಿಗೆ ನಾಯಕತ್ವ ನೀಡಬೇಕು ಎಂದು ಕೇಂದ್ರ ಸರ್ಕಾರ ನಿರ್ಧರಿಸಬೇಕು ಎಂದರು.

ಇದು ಹೊಂದಾಣಿಕೆಯ ರಾಜಕೀಯ. ವಿಧಾನಸಭೆಯಲ್ಲಿ ಕೂಡ ಮಾತನಾಡುವುದಿಲ್ಲ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ನೇರವಾಗಿ ಬೆದರಿಸುತ್ತಾರೆ. ವಿಜೇಂದ್ರ ನಿನ್ನ ಫೈಲ್ ತೆಗಿಲಾ ಎಂದು ಬೆದರಿಸುತ್ತಾರೆ.

ನಕಲಿ ಸಹಿ ಮಾಡಿದ್ದು ಗೊತ್ತಿಲ್ವಾ ಎಂದು ಕೇಳುತ್ತಾರೆ. ಬಿಜೆಪಿ ತನ್ನ ನೈತಿಕ ಶಕ್ತಿಯನ್ನೇ ವಿಧಾನಸಭೆಯಲ್ಲಿ ಕಳೆದುಕೊಂಡಿದೆ. ಕೇಂದ್ರ ಸರ್ಕಾರಕ್ಕೆ ಯಾಕೆ ವಿಶೇಷ ಮಮಕಾರ ಇದೆಯೋ ಗೊತ್ತಿಲ್ಲ. ಕುಟುಂಬ ರಾಜಕೀಯಕ್ಕೆ ಅವಕಾಶ ನೀಡಲ್ಲ ಎಂದು ಪ್ರಧಾನಿ ಪದೇಪದೇ ಹೇಳುತ್ತಾರೆ. ಕರ್ನಾಟಕದಲ್ಲಿ ಆ ವಿಚಾರ ಮರೆತು ಹೋಗಿರುವುದು ದುರ್ದೈವ ಎಂದರು.