ಉಡುಪಿ: ಕರ್ನಾಟಕ ಕರಾವಳಿಯಲ್ಲಿ ಪೂರ್ವ ಮುಂಗಾರು ಆರಂಭದ ಲಕ್ಷಣಗಳು ಕಾಣಿಸಿಕೊಂಡಿವೆ. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದ ವಿವಿಧ ಭಾಗಗಳಲ್ಲಿ ವಾತಾವರಣ ಅಸ್ಥಿರಗೊಂಡಿದ್ದು, ಕರಾವಳಿ ಮೀನುಗಾರರಿಗೆ ಹವಾಮಾನ ಇಲಾಖೆ ಬಿರುಗಾಳಿಯ ಮುನ್ನೆಚ್ಚರಿಕೆ ನೀಡಿದೆ.

ಕಡಲಿಗೆ ಇಳಿದಿರುವ ಯಾಂತ್ರಿಕೃತ ಬೋಟುಗಳು ತಕ್ಷಣ ತೀರ ಪ್ರದೇಶ ಸೇರುವಂತೆ ಸೂಚನೆ ನೀಡಲಾಗಿದೆ. ಮಲ್ಪೆ ಸೇರಿದಂತೆ ಕರಾವಳಿ ಭಾಗಗಳಲ್ಲಿ ಮೀನುಗಾರರು ಆತಂಕದ ನಡುವೆ ಬೋಟುಗಳನ್ನು ವಾಪಸ್ ಅಗುತ್ತಿದೆ.
ಕರ್ನಾಟಕ ಕರಾವಳಿಯಲ್ಲಿ ಪೂರ್ವ ಮುಂಗಾರಿನ ಲಕ್ಷಣಗಳು ಗೋಚರಿಸುತ್ತಿವೆ. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದ ವಿವಿಧ ಭಾಗಗಳಲ್ಲಿ ವಾತಾವರಣ ಅಸ್ಥಿರಗೊಂಡಿದ್ದು, ಬಿರುಗಾಳಿಯ ಮುನ್ನೆಚ್ಚರಿಕೆ ನೀಡಲಾಗಿದೆ.ಮೇ 19ರಿಂದ ಮೇ 23ರವರೆಗೆ ಕರಾವಳಿ ಪ್ರದೇಶಗಳಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಕೆಲವೆಡೆ ಇದು 60 ಕಿಲೋಮೀಟರ್ ವೇಗ ತಲುಪುವ ಸಾಧ್ಯತೆಯೂ ಇದೆ.ಈ ಹಿನ್ನೆಲೆಯಲ್ಲಿ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಇಲಾಖೆ ಸೂಚಿಸಿದೆ. ಈಗಾಗಲೇ ಸಮುದ್ರಕ್ಕೆ ತೆರಳಿರುವ ಯಾಂತ್ರಿಕೃತ ಬೋಟುಗಳು ತಕ್ಷಣ ತೀರ ಪ್ರದೇಶ ಸೇರಬೇಕೆಂದು ಎಚ್ಚರಿಕೆ ನೀಡಲಾಗಿದೆ.
ಉಡುಪಿ ಜಿಲ್ಲೆಯ ಮಲ್ಪೆ ಬಂದರು ಹಾಗೂ ಹಿನ್ನೀರು ಪ್ರದೇಶಗಳಲ್ಲಿ ಮೀನುಗಾರಿಕಾ ಬೋಟುಗಳು ವಾಪಸ್ ಬರುತ್ತಿರುವ ದೃಶ್ಯಗಳು ಕಂಡುಬಂದಿವೆ. ಬಿರುಗಾಳಿಯ ಮುನ್ನೆಚ್ಚರಿಕೆಯಿಂದ ಮೀನುಗಾರಿಕೆ ಚಟುವಟಿಕೆಗಳು ಅವಧಿಗೂ ಮುನ್ನ ಸ್ಥಗಿತಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಕೇರಳ–ಲಕ್ಷದ್ವೀಪ ಪ್ರದೇಶ ಹಾಗೂ ಕನ್ಯಾಕುಮಾರಿ ಸಮೀಪ ಗಾಳಿ ವೇಗ ಪಡೆದುಕೊಳ್ಳುತ್ತಿರುವ ಹಿನ್ನೆಲೆ, ಕರಾವಳಿ ಜಿಲ್ಲೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅವಧಿಗೂ ಮುನ್ನ ಮುಂಗಾರು ಕರಾವಳಿಗೆ ಅಪ್ಪಳಿಸಿದರೂ ಆಶ್ಚರ್ಯವಿಲ್ಲ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ, ಪೂರ್ವ ಮುಂಗಾರಿನ ಮುನ್ಸೂಚನೆಯೊಂದಿಗೆ ಕರಾವಳಿಯಲ್ಲಿ ಹವಾಮಾನ ಅಸ್ಥಿರಗೊಂಡಿದ್ದು, ಮೀನುಗಾರರು ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

