ಉಡುಪಿ: ವಿಭಜಿತ ಲಯನ್ಸ್‌ ಜಿಲ್ಲೆ 317Cರ 24ನೇ ಜಿಲ್ಲಾ ಸಂಪುಟ ಪದಗ್ರಹಣ ಸಮಾರಂಭವು ಆಗಸ್ಟ್‌ 8ರಂದು ಸಂಜೆ 4.30ಕ್ಕೆ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ ಎಂದು ಲಯನ್ಸ್‌ನ ಮಾಜಿ ಜಿಲ್ಲಾ ಗವರ್ನರ್ ಹಾಗೂ ಮುಖ್ಯ ಸಲಹೆಗಾರ ಜಯಕರ್ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲಾ ಗವರ್ನರ್ ರಾಜೀವ್‌ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದು, ಪ್ರಥಮ ಮಹಿಳೆ ಲಯನ್ ವೀಣಾ ಆರ್. ಕೋಟ್ಯಾನ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಅಂತರರಾಷ್ಟ್ರೀಯ ನಿರ್ದೇಶಕ ಹಾಗೂ ತರಬೇತುದಾರ ಪಂಕಜ್ ಮೆಹ್ರಾ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮಾಜಿ ಅಂತರರಾಷ್ಟ್ರೀಯ ನಿರ್ದೇಶಕರಾದ ವಂಶಿಧರ್ ಬಾಬು ಹಾಗೂ ಕೃಷ್ಣ ರೆಡ್ಡಿ, ಮಲ್ಟಿಪಲ್ ಅಧ್ಯಕ್ಷ ಅಶ್ವಥ್ ನಾರಾಯಣ್ ಮತ್ತು ರಾಮಚಂದ್ರನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ, ದ್ವಿತೀಯ ಉಪ ಜಿಲ್ಲಾ ಗವರ್ನರ್ ಇಂಜಿನಿಯರ್ ರಮಾನಂದ ಕೆ., ಸಂಪುಟ ಕಾರ್ಯದರ್ಶಿ ಸದಾನಂದ ನಾವಡ, ಕೋಶಾಧಿಕಾರಿ ವಿನೋದ್ ನಾರಾಯಣ ಸೇರಿದಂತೆ ಸಂಪುಟ ಸದಸ್ಯರು ಪದಗ್ರಹಣ ಮಾಡಲಿದ್ದಾರೆ ಎಂದು ತಿಳಿಸಿದರು.

ಕುಂದಾಪುರ ಸಿಟಿ ಸೆಂಟರ್ ಲಯನ್ಸ್‌ ಕ್ಲಬ್ ಆತಿಥ್ಯ ವಹಿಸಿರುವ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಲಯನ್ಸ್‌ ಕ್ಲಬ್‌ಗಳ ಪದಾಧಿಕಾರಿಗಳು, ಮಾಜಿ ಜಿಲ್ಲಾ ಗವರ್ನರ್‌ಗಳು, ಸದಸ್ಯರು ಹಾಗೂ ಸುಮಾರು 1,000 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

2026–27ನೇ ಸಾಲಿನಲ್ಲಿ 10 ಸಾವಿರ ಯೂನಿಟ್‌ ರಕ್ತ ಸಂಗ್ರಹ, 10 ಸಾವಿರ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರ ಕಣ್ಣಿನ ತಪಾಸಣೆ ನಡೆಸಿ ಉಚಿತ ಕನ್ನಡಕ ವಿತರಣೆ, ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಹಕಾರ ಹಾಗೂ ಜಿಲ್ಲೆಯ ಸುಮಾರು ಎರಡು ಲಕ್ಷಕ್ಕೂ ಅಧಿಕ ಜನರಿಗೆ ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ನೆರವು ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಜಿಲ್ಲಾ ಗವರ್ನರ್ ರಾಜೀವ್‌ ಕೋಟ್ಯಾನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ, ಪದಗ್ರಹಣ ಸಮಿತಿ ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಪ್ರಕಾಶಚಂದ್ರ, ಸಂಪುಟ ಕಾರ್ಯದರ್ಶಿ ಸದಾನಂದ ನಾವಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.