ಉಡುಪಿ: ತಾಲೂಕಿನ ಚರ್ಚ್ ರಸ್ತೆಯಲ್ಲಿ ಜು.31ರಂದು ನಸುಕಿನ ವೇಳೆ ನಡೆದ ಶೂಟೌಟ್ ಹಾಗೂ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಡುಪಿ ಜಿಲ್ಲಾ ಎಸ್ಪಿ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡ ಭಟ್ಕಳದಲ್ಲಿ ಬಂಧಿಸಿದೆ.
ಹೆಮ್ಮಾಡಿ ಸಮೀಪದ ಕನ್ನಡಕುದ್ರು ಮೂಲದ, ಸದ್ಯ ಕುಂದಾಪುರದ ಫ್ಲ್ಯಾಟ್‌ವೊಂದರಲ್ಲಿ ವಾಸವಿರುವ ಡೆರಿಕ್ ಕ್ರಾಸ್ತಾ (55) ಬಂಧಿತ ಆರೋಪಿ. ಹೆಬ್ರಿ ಮೂಲದ, ಪ್ರಸ್ತುತ ಬಾರ್ಕೂರು ಕಚೂರು ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದ ಐವನ್ ರಿಚರ್ಡ್ ಮಸ್ಕರೇನಸ್ ಯಾನೆ ಮುನ್ನಾ (45) ಅವರನ್ನು ಗುಂಡಿಕ್ಕಿ ಹತ್ಯೆಗೈದ ಬಳಿಕ ಡೆರಿಕ್ ತಲೆಮರೆಸಿಕೊಂಡಿದ್ದ.
ಆರೋಪಿಯನ್ನು ಶನಿವಾರ ಭಟ್ಕಳದ ಬೆಳಕೆ ಹೇರಬುಡಿಕೆ ಎಂಬಲ್ಲಿ ವಿಶೇಷ ಪೊಲೀಸ್ ತಂಡ ಬಂಧಿಸಿದೆ. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಎಸ್ಪಿ ತಿಳಿಸಿದ್ದಾರೆ.

