ಉಡುಪಿ: ಇದು ಕರಾವಳಿಯ ಅತ್ಯಂತ ಪ್ರಸಿದ್ದ ಜಲಪಾತಗಳಲ್ಲಿ ಒಂದು, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮಳೆಗಾಲದ ಆರಂಭದೊಂದಿಗೆ ಪ್ರಕೃತಿಯ ಸೊಬಗು ಉತ್ತುಂಗಕ್ಕೇರುವ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಪ್ರಸಿದ್ಧ ಕೂಡ್ಲು ಫಾಲ್ಸ್ ಇದೀಗ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ಕೈಗೆಟುಕದ ತಾಣವಾಗಿದೆ. ನಿತ್ಯ ನೂರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದ್ದ ಈ ಜಲಪಾತಕ್ಕೆ ಅರಣ್ಯ ಇಲಾಖೆ ಸದ್ಯ ನೋ ಎಂಟ್ರಿ ಬೋರ್ಡ್ ಹಾಕಿ ಪ್ರವೇಶವನ್ನು ಸಂಪೂರ್ಣ ನಿಷೇಧಿಸಿದೆ.
ಹೆಬ್ರಿಯಿಂದ ಸೋಮೇಶ್ವರಕ್ಕೆ ತೆರಳುವ ಮಾರ್ಗದಲ್ಲಿರುವ ಕೂಡ್ಲು ಫಾಲ್ಸ್, ರಾಷ್ಟ್ರೀಯ ಹೆದ್ದಾರಿ 169Aಯಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿದ್ದು, ಪಶ್ಚಿಮ ಘಟ್ಟದ ದಟ್ಟ ಕಾಡಿನ ಮಧ್ಯೆ ಅಡಗಿರುವ ಪ್ರಕೃತಿಯ ಅದ್ಭುತ ರಮಣೀಯ ತಾಣವಾಗಿದೆ. ಎತ್ತರದ ಬಂಡೆಗಳ ಮೇಲಿನಿಂದ ಬಿಳಿ ನೊರೆ ಚೆಲ್ಲುತ್ತಾ ಧುಮ್ಮಿಕ್ಕುವ ಜಲಪಾತ, ಹಚ್ಚಹಸಿರು ಕಾಡು, ಪಕ್ಷಿಗಳ ಕಲರವ ಮತ್ತು ತಂಪಾದ ವಾತಾವರಣದಿಂದ ಕೂಡ್ಲು ಫಾಲ್ಸ್ ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿದೆ.
ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಜಲಪಾತದ ವಿಡಿಯೊಗಳು ಮತ್ತು ಛಾಯಾಚಿತ್ರಗಳು ಭಾರೀ ವೈರಲ್ ಆಗಿದ್ದವು. ಇನ್ಸ್ಟಾಗ್ರಾಂ ರೀಲ್ಸ್, ಯೂಟ್ಯೂಬ್ ವ್ಲಾಗ್ಗಳು ಹಾಗೂ ಫೇಸ್ಬುಕ್ ಪೋಸ್ಟ್ಗಳ ಮೂಲಕ ಕೂಡ್ಲು ಫಾಲ್ಸ್ ರಾಜ್ಯದಾದ್ಯಂತ ಮತ್ತು ಹೊರರಾಜ್ಯಗಳಲ್ಲೂ ಖ್ಯಾತಿ ಗಳಿಸಿತ್ತು. ಪರಿಣಾಮ ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ನೂರಾರು ವಾಹನಗಳು ಇಲ್ಲಿಗೆ ಆಗಮಿಸುವುದು ಸಾಮಾನ್ಯ ದೃಶ್ಯವಾಗಿತ್ತು.
ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಕುಟುಂಬ ಸಮೇತರಾಗಿ ಕೂಡ್ಲು ಫಾಲ್ಸ್ಗೆ ಭೇಟಿ ನೀಡಿದ ಬಳಿಕ ಈ ಪ್ರವಾಸಿ ತಾಣ ಮತ್ತಷ್ಟು ಸುದ್ದಿಯಲ್ಲಿತ್ತು. ಅವರ ಭೇಟಿ ಬಳಿಕ ಅನೇಕ ಪ್ರವಾಸಿಗರು ಇದೇ ಸ್ಥಳವನ್ನು ತಮ್ಮ ಪ್ರವಾಸದ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.
ಪ್ರವಾಸಿಗರ ಹೆಚ್ಚುತ್ತಿರುವ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಕಳೆದ ಕೆಲವು ವರ್ಷಗಳಿಂದ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಮೂಲಭೂತ ಸೌಲಭ್ಯಗಳು, ವಾಹನ ನಿಲುಗಡೆ ವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡಿತ್ತು. ಆದರೆ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಈ ಜಲಪಾತದ ಸ್ವರೂಪವೇ ಬದಲಾಗುತ್ತದೆ. ಸಾಧಾರಣವಾಗಿ ಶಾಂತವಾಗಿ ಕಾಣುವ ಜಲಪಾತ ಕೆಲವೇ ಗಂಟೆಗಳ ಮಳೆಗೆ ರೌದ್ರ ರೂಪ ತಾಳಿ, ನೀರಿನ ಹರಿವು ಏಕಾಏಕಿ ಹೆಚ್ಚಾಗುತ್ತದೆ. ಬಂಡೆಗಳು ಜಾರುವಂತಾಗುತ್ತವೆ, ನೀರಿನ ಆಳ ಅಂದಾಜು ಮಾಡಲು ಸಾಧ್ಯವಾಗುವುದಿಲ್ಲ. ಕ್ಷಣಾರ್ಧದಲ್ಲಿ ಪರಿಸ್ಥಿತಿ ಅಪಾಯಕಾರಿಯಾಗಿ ಮಾರ್ಪಡುವ ಸಾಧ್ಯತೆ ಹೆಚ್ಚಿರುತ್ತದೆ.
ಈ ಹಿನ್ನೆಲೆಯಲ್ಲಿ ಯಾವುದೇ ದುರ್ಘಟನೆ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆ ಜಲಪಾತಕ್ಕೆ ಹೋಗುವ ಮುಖ್ಯ ಮಾರ್ಗದಲ್ಲೇ ಗೇಟ್ ಅಳವಡಿಸಿ ಪ್ರವೇಶವನ್ನು ಸಂಪೂರ್ಣ ಬಂದ್ ಮಾಡಿದೆ. ಮಳೆಗಾಲದಲ್ಲಿ ಸುರಕ್ಷತೆಗೇ ಮೊದಲ ಆದ್ಯತೆ ನೀಡಲಾಗಿದ್ದು, ಪ್ರವಾಸಿಗರು ನಿಷೇಧವನ್ನು ಉಲ್ಲಂಘಿಸಿ ಒಳಪ್ರವೇಶಿಸಲು ಯತ್ನಿಸಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಪ್ರಕೃತಿಯ ಸೌಂದರ್ಯ ಮಳೆಗಾಲದಲ್ಲಿ ಅತ್ಯಂತ ಆಕರ್ಷಕವಾಗಿದ್ದರೂ, ಅದೇ ಸಮಯದಲ್ಲಿ ಅದು ಜೀವಕ್ಕೆ ಅಪಾಯವನ್ನೂ ಉಂಟುಮಾಡಬಲ್ಲದು. ಹೀಗಾಗಿ ಪ್ರಕೃತಿಯ ಸೊಬಗನ್ನು ದೂರದಿಂದಲೇ ಆಸ್ವಾದಿಸಿ, ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವಂತೆ ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ವಿನಂತಿಸಿದೆ.
ವಾಯ್ಸ್ 3; ಒಟ್ಟಾರೆಯಾಗಿ ಮಳೆಗಾಲ ಅಂತ್ಯಗೊಂಡು ಪರಿಸ್ಥಿತಿ ಸುರಕ್ಷಿತವಾಗಿದೆ ಎಂದು ತಜ್ಞರು ಮತ್ತು ಅಧಿಕಾರಿಗಳು ಖಚಿತಪಡಿಸಿಕೊಂಡ ಬಳಿಕ ಮತ್ತೆ ಪ್ರವಾಸಿಗರಿಗೆ ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಪ್ರಕೃತಿಯ ಈ ಸ್ವರ್ಗದ ಬಾಗಿಲು ಪ್ರವಾಸಿಗರಿಗೆ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದೆ.

