ಉಡುಪಿ: ಶ್ರೀಕೃಷ್ಣನ ಜನ್ಮದಿನವಾದ ಕೃಷ್ಣಜನ್ಮಾಷ್ಟಮಿಯ ಸಂಭ್ರಮಕ್ಕೆ ಉಡುಪಿ ಸಜ್ಜಾಗಿದ್ದು, ಇಂದು ಹಾಗೂ ನಾಳೆ ಮಠದಲ್ಲಿ ಮತ್ತು ನಗರದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಹಿನ್ನೆಲೆಯಲ್ಲಿ ಪರ್ಯಾಯ ಪೀಠಾಧಿಪತಿ ಶ್ರೀ ಶೀರೂರು ವೇದವರ್ಧನ ತೀರ್ಥ ಶ್ರೀಪಾದರು ಭಕ್ತರಿಗೆ ಸಂದೇಶ ನೀಡಿದ್ದು, ಧರ್ಮದ ಸ್ಥಾಪನೆ ಹಾಗೂ ಅಧರ್ಮದ ಸಂಹಾರಕ್ಕಾಗಿ ಶ್ರೀಕೃಷ್ಣ ಅವತಾರವೆತ್ತಿದನು.
ಶ್ರೀಕೃಷ್ಣನು ಮಧ್ಯರಾತ್ರಿ ಜನಿಸಿದನೆಂಬುದಕ್ಕೂ ವಿಶೇಷ ಅರ್ಥವಿದೆ. ಮಧ್ಯರಾತ್ರಿಯ ವೇಳೆ ರಾಕ್ಷಸರ ಸಂಚಾರ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಅಧರ್ಮವನ್ನು ಸಂಹರಿಸಿ ಧರ್ಮವನ್ನು ಸ್ಥಾಪಿಸುವ ಉದ್ದೇಶದಿಂದ ಶ್ರೀಕೃಷ್ಣ ಅವತರಿಸಿದನು ಎಂಬ ನಂಬಿಕೆಯಿದೆ ಎಂದು ಶ್ರೀಗಳು ಹೇಳಿದರು.
ಕೃಷ್ಣಜನ್ಮಾಷ್ಟಮಿಯನ್ನು ಆಚರಿಸುವುದು ಕೇವಲ ಸಂಭ್ರಮಕ್ಕಾಗಿ ಅಲ್ಲ. ಶ್ರೀಕೃಷ್ಣನ ಸ್ಮರಣೆ ಮಾಡಿ, ಆತನು ನುಡಿದಂತೆ ನಡೆದುಕೊಳ್ಳುವ ಸಂಕಲ್ಪ ಮಾಡಬೇಕು. ಈ ಹಿನ್ನೆಲೆಯಲ್ಲಿ ನಡೆಯುವ ಎಲ್ಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕೃಷ್ಣನ ಸ್ಮರಣೆಯೊಂದಿಗೆ ಆತನ ಸಂದೇಶವನ್ನು ಜನರಿಗೆ ತಲುಪಿಸುವಂತಾಗಬೇಕು ಎಂದು ಶ್ರೀಗಳು ಕರೆ ನೀಡಿದರು.
ಶ್ರೀಕೃಷ್ಣನ ಕೃಪೆಯಿಂದ ಎಲ್ಲರಿಗೂ ಒಳಿತಾಗಲಿ, ಸಮಾಜದಲ್ಲಿ ಧರ್ಮ, ಶಾಂತಿ ನೆಲೆಸಲಿ ಎಂದು ಪರ್ಯಾಯ ಶೀರೂರು ಶ್ರೀಗಳು ಹಾರೈಸಿದರು.

