ಉಡುಪಿ: ಹೊಟ್ಟೆಯಲ್ಲಿ ಬೆಳೆದಿದ್ದ ಗಡ್ಡೆಯನ್ನು ಹೊರತೆಗೆಯುವ ಸಂದರ್ಭದಲ್ಲಿ ಮಹಿಳೆ ಸಾವಿಗೀಡಾಗಿದ ಘಟನೆ ಕಾರ್ಕಳ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಇದರಿಂದ ಆಕ್ರೋಶಗೊಂಡ ಬಂಧುಗಳು ಆಸ್ಪತ್ರೆಯ ಮುಂದೆ ಜಮಾವಣೆಗೊಂಡು ತಮ್ಮ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಪೊಲೀಸರು ಮಧ್ಯೆ ಪ್ರವೇಶಿಸಿದ್ದಾರೆ. ಸಾಣೂರು ಮೂಲದ ಮಹಿಳೆ ಜುಬೇದಾ(54) ಎಂಬವರು ಪ್ರಾಣತೆತ್ತ ಮಹಿಳೆ.

ಆಸ್ಪತ್ರೆಯ ದಾವತ್ ಹೋಟೆಲ್ ಪರಿಸರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಜುಬೇದಾ ಅವರು‌ ತೀವ್ರ ಹೊಟ್ಟೆ‌ನೋವಿನಿಂದ ಬಳಲುತ್ತಿದ್ದರು. ಹೊಟ್ಟೆಯಲ್ಲಿ ಗಡ್ಡೆ ಬೆಳೆದಿರುವುದು ಘಟನೆ ಕಾರಣ ಎನ್ನಲಾಗಿದ್ದು, ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಹಿಳೆ ಮೃತಪಟ್ಟಿದ್ದರು. ಇದರಿಂದ ಆಕ್ರೋಶಿತ ಗೊಂಡ ಮಹಿಳೆಯ ಬಂಧುಗಳು ಹಾಗೂ ಗ್ರಾಮಸ್ಥರು ಆಸ್ಪತ್ರೆಯ ಮುಂಭಾಗ ನೆರೆದು ಆಸ್ಪತ್ರೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿ ಹದಗೆಡುತ್ತಿದ್ದಂತೆ ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣಾ ಪೊಲೀಸರು ಆಗಮಿಸಿ ಶಾಂತಿ ಸುವ್ಯವಸ್ಥೆ ಕಾಪಾಡಿದ್ದಾರೆ.‌ ಮಣಿಪಾಲ್ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ಸಾವಿಗೆ ಕಾರಣ ತಿಳಿದುಕೊಳ್ಳಲಾಗುತ್ತಿದೆ.