ಉಡುಪಿ: ಆಸಕ್ತಿ, ಶ್ರದ್ಧೆ ಇದ್ದರೆ ಸಣ್ಣ ತುಂಡು ಭೂಮಿಯಲ್ಲೂ ಉತ್ತಮ ಕೃಷಿ ಮಾಡಬಹುದು. ಅದಕ್ಕೆ ಈ ವ್ಯಕ್ತಿ ಉತ್ತಮ ಉದಾಹರಣೆ. ತನ್ನ ಮನೆಯ ಸುತ್ತಲೂ ಒಂದಿಂಚು ಜಾಗ ಖಾಲಿ ಬಿಡದೆ ತರಹೇವಾರಿ ಹೂವು, ಹಣ್ಣು, ತರಕಾರಿ ಬೆಳೆಸಿ ಸೈ ಎನಿಸಿಕೊಂಡಿದ್ದಾರೆ.

ಅವರು ಬೇರೆ ಯಾರು ಅಲ್ಲ ಕಾಪು ತಾಲೂಕಿನ ಕಟಪಾಡಿ ಗ್ರಾಮದಲ್ಲಿರುವ ಜಯಕರ‌ ಶೆಟ್ಟಿ ಅವರೇ ಈ ಸಾಧಕ ಕೃಷಿಕ. ಇವರ ಮನೆಯ ವಾತಾವರಣ ಒಮ್ಮೆ ನೋಡಿದ್ರೆ ಎಂಥವರ ಮನಸ್ಸು ರಿಲ್ಯಾಕ್ಸ್ ಆಗದೆ ಇರಲ್ಲ. ಮನೆಯ ಸುತ್ತಲೂ ಬಗೆ ಬಗೆಯ, ಬಣ್ಣ ಬಣ್ಣದ ಹೂವುಗಳು, ತರಹೇವಾರಿ ಹಣ್ಣು, ತರಕಾರಿ, ಆರೋಗ್ಯ ವೃದ್ಧಿಸುವ ಗಿಡೌಷಧಿ ಹೀಗೆ ಮನುಷ್ಯನ ಜೀವನಕ್ಕೆ ಬೇಕಾದ ಎಲ್ಲಾ ಹಣ್ಣು ಹೂವು ತರಕಾರಿ ನೈಸರ್ಗಿಕವಾಗಿ ಮನೆಯ ಬಳಿಯೇ ಸಿಗ್ತಾಯಿದೆ. ಇದಕ್ಕೆ ಮುಖ್ಯ ಕಾರಣ ಮನೆ ಮಾಲೀಕ ಜಯಕರ ಬಿ.ಶೆಟ್ಟಿ ಅವರ ಕೃಷಿ ಮೇಲಿನ ಅಪಾರ ಆಸಕ್ತಿ.

ಜಯಕರ ಶೆಟ್ಟಿ ಅವರು ಬಾಲ್ಯದಲ್ಲೇ ಮುಂಬೈ ಗೆ ಹೋಗಿ ಅಲ್ಲೇ ಶಿಕ್ಷಣವನ್ನು ಪಡೆಯುತ್ತಿದ್ದಾಗ ಸ್ಕೌಟ್ ನಲ್ಲಿ ಸೇವೆ ಸಲ್ಲಿಸುವಾಗ ಸಸಿಗಳನ್ನ ನೆಟ್ಟು ಪೋಷಿಸುವುದನ್ನ ಕಲಿತ್ರು. ಹೀಗೆ ಬಾಲ್ಯದ ದಿನಗಳನ್ನ ಕಳೆದು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಾ ಯಾವುದೋ ಕಾರಣಕ್ಕೆ ಊರಿಗೆ ಮರಳಿದ್ರು. ಹೀಗೆ ಬಂದವರೇ ಮನೆಯ ಸುತ್ತ ಇದ್ದ ಖಾಲಿ ಜಾಗದಲ್ಲೇ ಗಿಡಗಳನ್ನ ಬೆಳೆಸಿ ಗೊಬ್ಬರವನ್ನ ಹಾಕಿ ಕೃಷಿಕರಾದ್ರು. ಮನೆಯ ಹಿರಿಯ ಕೃಷಿ ಕಾಯಕವನ್ನ ಮುಂದುವರೆಸಿದ್ರು.

ಸದ್ಯ 35ಸೆಂಟ್ಸ್ ಜಾಗದಲ್ಲಿ ಮನೆಯ ಜೊತೆಗೆ ಸಕ್ಕರೆಗಂಚು, ಪಪ್ಪಾಯ, ಚಿಕ್ಕು, ಬಗೆಬಗೆಯ ಹಲಸು, ಸೀತಾಪಲ, ರಾಮಫಲ, ಲಕ್ಷ್ಮಣ ಫಲ, ಹನುಮಂತಫಲ, ಅನಾನಸು, ತೆಂಗು, ಅಡಿಕೆ, ಗೆಣಸು, ಬಸಳೆ, ಕರಿಮೆಣಸು, ವೀಳ್ಯದೆಲೆ, ದೀವ್ ಹಲಸು, ಮಜ್ಜಿಗೆಸೊಪ್ಪು, ಸಾಂಬಾರ್ ಬಳ್ಳಿ, ವಂದೆಲಗ ಹೀಗೆ 170 ಬಗೆಯ ಹೂವು, ಹಣ್ಣು, ತರಕಾರಿಗಳನ್ನ ಬೆಳೆಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.