ಉಡುಪಿ: ಶೀರೂರು ಮಠದ ಶ್ರೀ‌ ವೇದವರ್ಧನತೀರ್ಥ ಶ್ರೀಪಾದರು ಜ.1ರಂದು ಪ್ರಥಮ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಆಮಂತ್ರಣ ಪತ್ರಿಕೆ ವಿತರಣೆಯ ಮಹಾ ಅಭಿಯಾನಕ್ಕೆ ಉಡುಪಿ ರಥಬೀದಿಯ ಕನಕ ಗೋಪುರದ ಮುಂಭಾಗದಲ್ಲಿ ಭಾನುವಾರ ಚಾಲನೆ ನೀಡಲಾಯಿತು.

ಖ್ಯಾತ ವಿದ್ವಾಂಸ ಅಷ್ಟಾವಧಾನಿ ಕಬ್ಬಿನಾಲೆ ವಸಂತ ಭಾರದ್ವಾಜ್ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು. ಉಡುಪಿ ಜಿಲ್ಲೆಯ ಆರು ಲಕ್ಷಕ್ಕೂ ಅಧಿಕ ಮನೆಗಳಿಗೆ ಆಮಂತ್ರಣ ನೀಡುವ ಯೋಜನೆಯನ್ನು ಪರ್ಯಾಯ ಸ್ವಾಗತ ಸಮಿತಿ ಹಮ್ಮಿಕೊಂಡಿದೆ.

ಶೀರೂರು ದಿವಾನರಾದ ಉದಯಕುಮಾರ್ ಸರಳತ್ತಾಯ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಪದಾಧಿಕಾರಿಗಳಾದ ಉದಯಕುಮಾರ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್ ಮೊದಲಾದವರು ಇದ್ದರು.