ಉಡುಪಿ: ಉಡುಪಿ ಜಿಲ್ಲೆಯ ಪಡುಬಿದ್ರಿ, ಕೋಟ ಮತ್ತು ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳವು ಪ್ರಕರಣಗಳಿಗೆ ಸಂಬಂಧಿಸಿ ಅಂತರಾಜ್ಯ ಕಳವು ಆರೋಪಿಗಳನ್ನು ಬಂಧಿಸುವಲ್ಲಿ ಪಡುಬಿದ್ರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾಸರಗೋಡು ಜಿಲ್ಲೆಯ ಕುಂಬಳೆ ಮೊಗ್ರಾಲ್ ಮೂಲದ ಪುತ್ತೂರು ತಾಲೂಕಿನ ಕೊಯ್ಲ ಗ್ರಾಮದ ಕಲಾಯಿ ನಿವಾಸಿ ಇಬ್ರಾಹಿಂ ಕಲಂದರ್ ಹಾಗೂ ಕಾಸರಗೋಡು ಜಿಲ್ಲೆಯ ಕುಂಬಳೆ ಉರ್ಮಿಚಾಲ್ ಬೇಕೂರು ನಿವಾಸಿ ರಿಯಾಝ್ ಯಾನೆ ಕಡಪ್ಪ ರಿಯಾಝ್ ಬಂಧಿತ ಆರೋಪಿಗಳು.

ಜೂ.22ರಂದು ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಾದೆಬೆಟ್ಟು ಗ್ರಾಮದ ಕಾಮತ್ ಪೆಟ್ರೋಲ್ ಪಂಪ್ ಬಳಿ ಗಣೇಶ್‌ಪ್ರಸಾದ್ ಶೆಟ್ಟಿ ಎಂಬರವರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಈ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಆರೋಪಿಯನ್ನು ಬಂಧಿಸಿ, ಕಳ್ಳತನಕ್ಕೆ ಉಪಯೋಗಿಸಿದ ಕಾರನ್ನು ಮತ್ತು 24,000ರೂ. ನಗದನ್ನು ವಶಪಡಿಸಿಕೊಂಡಿ‌ದ್ದಾರೆ. ಆರೋಪಿಗಳನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.