ಉಡುಪಿ: ಜಿಲ್ಲೆಯಲ್ಲಿ ತೀವ್ರ ಉರಿ ಬಿಸಿಲಿನ ಪರಿಣಾಮ ಈಗ ಜಲಮೂಲಗಳ ಮೇಲೂ ಸ್ಪಷ್ಟವಾಗಿ ಕಾಣಿಸುತ್ತಿದೆ. ಜಿಲ್ಲೆಯ ಜೀವನಾಡಿಯಾದ ಸ್ವರ್ಣ ನದಿಯ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ನೀರಿನ ಅಭಾವದ ಆತಂಕ ಮೂಡಿಸಿದೆ.
ತೀವ್ರ ಬಿಸಿಲು ಮತ್ತು ಮಳೆಯ ಕೊರತೆ—ಇವೆರಡರ ಡಬಲ್ ಪರಿಣಾಮ ಉಡುಪಿ ಜಿಲ್ಲೆಯಲ್ಲಿ ಕಾಣಿಸುತ್ತಿದೆ. ಸಾಮಾನ್ಯವಾಗಿ ಹೆಚ್ಚು ಮಳೆಯಾಗುವ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ಉಡುಪಿಯಲ್ಲೇ ಈಗ ಸ್ವರ್ಣ ನದಿಯ ನೀರಿನ ಮಟ್ಟ ಕುಸಿತ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ.ಈ ಬಾರಿ ಹೆಚ್ಚಿದ ಉಷ್ಣಾಂಶದಿಂದ ಭೂಮಿಯಲ್ಲಿನ ನೀರು ಬೇಗ ಆವಿಯಾಗುತ್ತಿದ್ದು, ಭೂಗರ್ಭ ಜಲಮಟ್ಟ ಕೂಡ ಇಳಿಕೆಯಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.
ಇನ್ನೊಂದೆಡೆ ವಾರಾಹಿ ನದಿಯಿಂದ ನೀರು ಪೂರೈಕೆ ನಡೆಯುತ್ತಿರುವುದರಿಂದ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿಲ್ಲ. ಆದರೆ ಇದೇ ಪರಿಸ್ಥಿತಿ ಮುಂದುವರೆದರೆ ಬರಗಾಲದ ಭೀತಿ ಎದುರಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚು ಇದ್ದರೂ, ನೀರನ್ನು ಸಮರ್ಪಕವಾಗಿ ಸಂಗ್ರಹಿಸುವ ವ್ಯವಸ್ಥೆಯ ಕೊರತೆ, ಜಲಾಶಯಗಳ ನಿರ್ವಹಣೆಯ ಲೋಪ ಮತ್ತು ವೈಜ್ಞಾನಿಕ ನೀರಿನ ನಿರ್ವಹಣೆಯ ಅಭಾವವೇ ಇಂತಹ ಪರಿಸ್ಥಿತಿಗೆ ಕಾರಣ ಎನ್ನಲಾಗುತ್ತಿದೆ.ಈ ಹಿನ್ನೆಲೆ ಸಾರ್ವಜನಿಕರಿಗೆ ನೀರನ್ನು ಮಿತವಾಗಿ ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕುಡಿಯುವ ನೀರನ್ನು ಅನಗತ್ಯವಾಗಿ ವ್ಯರ್ಥ ಮಾಡಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಹಳೆಯ ಕೆರೆ-ಕೊಳಗಳ ಪುನರುಜ್ಜೀವನ, ಮಳೆ ನೀರಿನ ಸಂಗ್ರಹಣೆ ಹಾಗೂ ಜಲ ಸಂಪನ್ಮೂಲಗಳ ವೈಜ್ಞಾನಿಕ ನಿರ್ವಹಣೆ ಅತ್ಯಗತ್ಯವಾಗಿದೆ ಎಂದು ತಜ್ಞರು ಒತ್ತಾಯಿಸಿದ್ದಾರೆ.ಅತಿ ಹೆಚ್ಚು ಮಳೆಯಾಗುವ ಜಿಲ್ಲೆ ಎಂಬ ಹೆಗ್ಗಳಿಕೆ ಇದ್ದರೂ, ಸರಿಯಾದ ಯೋಜನೆ ಮತ್ತು ನಿರ್ವಹಣೆ ಇಲ್ಲದಿದ್ದರೆ ನೀರಿನ ಸಂಕಷ್ಟ ತಪ್ಪುವುದಿಲ್ಲ ಎಂಬುದು ಇಂದಿನ ಪರಿಸ್ಥಿತಿ ಸ್ಪಷ್ಟಪಡಿಸುತ್ತಿದೆ. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆ ಈ ಸವಾಲನ್ನು ಹೇಗೆ ಎದುರಿಸಲಿದೆ ಎಂಬುದು ಕಾದು ನೋಡಬೇಕಾಗಿದೆ.

