ಉಡುಪಿ: ರೈಲ್ವೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ನಡುವಿನ ಹೊಂದಾಣಿಕೆ ಕೊರತೆಯಿಂದ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ವಿಳಂಬವಾಗಿದೆ ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ದೂರಿದರು.

ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಉಡುಪಿ ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಇಂದ್ರಾಳಿ ರೈಲ್ವೆ ಸೇತುವೆ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾಮಗಾರಿ ವಿಳಂಬದಿಂದಾಗಿ ನಿರ್ಮಾಣ ವೆಚ್ಚ ಕೂಡ ಜಾಸ್ತಿಯಾಗಿ ಸರಕಾರಕ್ಕೆ ದೊಡ್ಡ ನಷ್ಟವಾಗುತ್ತಿದೆ. ಈ ಎರಡು ಇಲಾಖೆಗಳ ಮಧ್ಯೆ ಹೊಂದಾಣಿಕೆ ಮೂಡಿಸುವ ಕಾರ್ಯವನ್ನು ನಮ್ಮ ಸಂಸದರು ಮಾಡಬೇಕಿತ್ತು. ಆದರೆ ಅವರು ಪ್ರತಿ ಬಾರಿಯೂ ಒಂದು ತಿಂಗಳ ಗಡುವು ನೀಡಿ ಕಾಮಗಾರಿ ಮುಗಿಸುವುದಾಗಿ ಸುಳ್ಳು ಭರವಸೆಯನ್ನು ನೀಡುತ್ತಿದ್ದಾರೆ. ಇದರಿಂದ ಅದೆಷ್ಟೋ ಮಂದಿ ಇಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ರೈಲ್ವೆ ಸೇತುವೆ ಕಾಮಗಾರಿ ವಿಳಂಬವಾಗಿರುವುದರಿಂದ ಕಳೆದ ಎಂಟು ವರ್ಷಗಳಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಆದರೆ ಈ ಬಗ್ಗೆ ಬಿಜೆಪಿಯವರಿಗೆ ಸ್ವಲ್ಪವೂ ಪಶ್ಚಾತ್ತಾಪ ಇಲ್ಲ. ಅವರು ಉಡುಪಿ ಜನತೆಗೆ ವರ್ಷದ 365 ದಿನ ಎಪ್ರಿಲ್ ಪೂಲ್ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಉಡುಪಿ ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಅಮೃತ್ ಶೆಣೈ ಮಾತನಾಡಿ, ಇಂದ್ರಾಳಿ ಸೇತುವೆ ಕಾಮಗಾರಿ ವಿಳಂಬದಿಂದ ಅನೇಕ ಅಪಘಾತಗಳು ಸಂಭವಿಸಿ ಹಲವು ಮಂದಿ ಜೀವ ಕಳೆದುಕೊಂಡಿದ್ದಾರೆ. ಆದರೂ ಕೇಂದ್ರ ಸರಕಾರ ಕಿವುಡಾಗಿದೆ ಮತ್ತು ಕುರುಡು ಆಗಿದೆ. ನಮ್ಮ ಸಂಸದರು ಅಗತ್ಯವೇ ಇಲ್ಲದ ರೀತಿ ವರ್ತಿಸುತ್ತಿದ್ದಾರೆ. ಶೋಭಾ ಅವರ ಹಾದಿಯಲ್ಲಿಯೇ ಕೋಟ ಶ್ರೀನಿವಾಸ ಪೂಜಾರಿ ಕೂಡ ಸಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸರಕಾರದ ವಿರುದ್ಧ ನಮ್ಮ ಆಕ್ರೋಶ ವ್ಯಕ್ತಪಡಿಸಲು ಈ ಹೋರಾಟ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ಅಸಹಾಯಕ ರಾಗಿರುವ ಸಂಸದರು, ನಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.