ಉಡುಪಿ: ಬಿಕರ್ನಕಟ್ಟೆ- ಕಾರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಣೂರು ಶ್ರೀರಾಮ ಮಂದಿರದ ಎದುರಿನ ಸೇತುವೆ ಕಾಮಗಾರಿ ನಿಧಾನಗತಿ, ಅವೈಜ್ಞಾನಿಕ ಸಂಚಾರ ವ್ಯವಸ್ಥೆ ಹಾಗು ಅಪೂರ್ಣ ಸುರಕ್ಷತಾ ಕ್ರಮಗಳಿಂದ ಈ ಭಾಗ ಇದೀಗ ವಾಹನ ಸವಾರರಿಗೆ ಅಪಘಾತಗಳ ಹಾದಿಯಾಗಿ ಪರಿಣಮಿಸಿದೆ.
ಕಳೆದ 15 ದಿನಗಳಿಂದ ಸೇತುವೆಯ ಒಂದು ಭಾಗದಲ್ಲಿ ಡಾಮರೀಕರಣ ಕಾಮಗಾರಿ ನಡೆಯುತ್ತಿದ್ದು ಎರಡು ಕಡೆಯ ವಾಹನಗಳನ್ನು ಒಂದೇ ರಸ್ತೆಯಲ್ಲಿ ಸಂಚರಿಸುವಂತೆ ಮಾಡಿರುವುದು ಸರಣಿ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಇದೇ ಸ್ಥಳದಲ್ಲಿ ರವಿವಾರ ಮಾಜಿ ಸಚಿವ ಬಿ ರಮಾನಾಥ್ ರೈ ಪ್ರಯಾಣಿಸುತ್ತಿದ್ದ ಕಾರು ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಅದೃಷ್ಟವಶಾತ್ ಜೀವಹಾನಿ ಸಂಭವಿಸಿಲ್ಲ. ಈ ಘಟನೆ ಬಳಿಕ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆ ಮತ್ತೊಮ್ಮೆ ಚರ್ಚೆಗೆ ಬಂದಿದೆ.
ಸೇತುವೆಯ ಒಂದು ಬದಿಯನ್ನು ಬಂದ್ ಮಾಡಿ ಕಾಮಗಾರಿ ನಡೆಸುತ್ತಿರುವ ಕಾರಣ ಎರಡು ಕಡೆಯ ವಾಹನಗಳು ಒಂದೇ ಲೇನ್ ನಲ್ಲಿ ಸಂಚರಿಸುತ್ತಿವೆ. ಮಂಗಳೂರು ಹಾಗೂ ಕಾರ್ಕಳ ಕಡೆಯಿಂದ ವೇಗವಾಗಿ ಬರುವ ವಾಹನಗಳು ಡಿವೈಡರ್ ಸಮೀಪ ತಿರುವು ಪಡೆಯುವಾಗ ಎದುರು ಬರುವ ವಾಹನದ ಅಂದಾಜು ಸಿಗದೇ ಗೊಂದಲ ಉಂಟಾಗುತ್ತಿದೆ.
ಸೇತುವೆ ಹಾಗೂ ರಸ್ತೆ ವಿಭಾಜಕದ ಬಳಿ ಸಮರ್ಪಕ ರೆಫೆಕ್ಟರ್ ಗಳು, ಎಚ್ಚರಿಕೆ ದೀಪಗಳು ಹಾಗೂ ಸೂಚನಾ ಫಲಕಗಳ ಕೊರತೆ ದೊಡ್ಡ ಸಮಸ್ಯೆಯಾಗಿದೆ. ರಾತ್ರಿ ವೇಳೆ ಹಲವು ವಾಹನಗಳು ತಡೆಗೋಡೆ ಹಾಗೂ ಡಿವೈಡರ್ ಗೆ ಡಿಕ್ಕಿ ಹೊಡೆದು ಹಾನಿಗೊಳಗಾಗಿರುವ ಘಟನೆಗಳು ನಡೆದಿದೆ. ಧ್ವಂಸಗೊಂಡ ಫಲಕಗಳನ್ನು ಇದುವರೆಗೂ ಮರುಸ್ಥಾಪಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

