ಉಡುಪಿ: ಬೈಂದೂರು ತಾಲೂಕಿನ ಶಿರೂರು ಗ್ರಾಮದಲ್ಲಿ ಯಾವುದೇ ನಿಯಮಗಳನ್ನ ಅನುಸರಿಸದೇ ಅಕ್ರಮವಾಗಿ ಮರ ಕಡಿದು, ಟನ್ ಗಟ್ಟಲೆ ಮಣ್ಣು ಸಾಗಾಟ ಮಾಡಲಾಗಿದೆ. ಆದರೆ, ಸಾಮಾನ್ಯ ಜನರಿಗೆ ನಿಯಮ ಕಾನೂನಿನ ಸಬೂಬು ಹೇಳುವ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ.
ಹೌದು ಬೈಂದೂರು ತಾಲೂಕಿನ ಶಿರೂರು ಗ್ರಾಮ ಪಂಚಾಯತಿಯ ಮೇಲ್ಬಂಕ್ತಿ ಅಂಬೇಡ್ಕರ್ ನಗರದಲ್ಲಿ ಅಕ್ರಮ ಮಣ್ಣು ಸಾಗಾಟ ನಡೆಯುತ್ತಿದೆ. ಸರಕಾರಿ ಜಾಗದಲ್ಲಿ ರಾಜಾರೋಷವಾಗಿ ಟನ್ ಗಟ್ಟಲೆ ಮಣ್ಣು ಸಾಗಾಟ ಮಾಡಿರುವುದು ಅಲ್ಲದೆ, ಸರಕಾರಿ ಜಾಗದಲ್ಲಿ ಬೋರ್ವೆಲ್ ಕೊರೆದು ವಿದ್ಯುತ್ ಅಳವಡಿಸಿ ನಿರಂತರವಾಗಿ ಲೂಟಿ ಮಾಡುವ ಕಾರ್ಯ ನಡೆಯುತ್ತಿದೆ. ಇಷ್ಟಾದರೂ ಯಾವುದೇ ಅಧಿಕಾರಿಗಳು ಇತ್ತ ತಲೆ ಹಾಕಿಯೂ ನೋಡಿಲ್ಲ ಎನ್ನುವುದೇ ಇಲ್ಲಿನ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಶಿರೂರು ಮೇಲ್ಪಂಕ್ತಿ ದಲಿತ ಕಾಲೋನಿಯ ಮೇಲ್ಭಾಗದಲ್ಲಿರುವ ಸರಕಾರಿ ಜಾಗ ಹಲವು ವರ್ಷಗಳಿಂದ ಕೆಂಪು ಮಣ್ಣಿನ ಕಿರುಬೆಟ್ಟದಂತಿದ್ದ ಪ್ರದೇಶ. ಸಾಕಷ್ಟು ಮರ ಗಿಡಗಳ ಜೊತೆ ಬೃಹತ್ ಆಕಾರದ ಗುಡ್ಡವಿದ್ದ ಜಾಗದಲ್ಲಿ ಈಗ ದೊಡ್ಡ ಪ್ರಪಾತವೇ ಸೃಷ್ಟಿಯಾಗಿದೆ. ದಲಿತ ಕಾಲೋನಿ ನಿವಾಸಿಗಳ ವಿರೋಧದ ನಡುವೆಯೂ ಕೂಡ ಇಲ್ಲಿ ಅಕ್ರಮ ಮಣ್ಣು ಸಾಗಾಟ ರಾಜಾರೋಷವಾಗಿ ನಡೆದಿದೆ. ಈಗಾಗಲೇ ಸುಮಾರು 30 ಅಡಿಗಳಿಗೂ ಆಳವಾದ ಕಂದಕವನ್ನ ಮುನ್ನು ಕಳ್ಳರು ನಿರ್ಮಿಸಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಮಣ್ಣು ತೆಗೆದ ಜಾಗದಿಂದ ಕೆಳಗೆ ಸುಮಾರು 20 ದಲಿತ ಕುಟುಂಬಗಳು ಹಲವು ವರ್ಷಗಳಿಂದ ವಾಸವಾಗಿದ್ದು ಮಣ್ಣು ತೆಗೆದ ಪರಿಣಾಮ ಗುಡ್ಡ ಜರಿಯುವ ಭೀತಿಯ ಎದುರಾಗಿದೆ. ಹಗಲು ರಾತ್ರಿ ಇಲ್ಲಿ ಜೆಸಿಬಿ ಟಿಪ್ಪರ್ ಬಳಸಿ ನಿರಂತರವಾಗಿ ಮಣ್ಣು ತೆಗೆದು ಸಾಗಾಟ ಮಾಡಲು ಪಂಚಾಯತ್ ನಿರ್ಮಿಸಿದ ರಸ್ತೆಯನ್ನು ಬಳಸಿಕೊಂಡ ಪರಿಣಾಮ ಪಂಚಾಯತ್ ರಸ್ತೆಯು ಕೂಡ ಸಂಪೂರ್ಣ ಹಾಳಾಗಿದೆ. ಇಲ್ಲಿನ ಅಕ್ರಮದ ಕುರಿತು ಸ್ಥಳೀಯರು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರು ಕೂಡ ಇದುವರೆಗೆ ಯಾವುದೇ ಕ್ರಮ ನಡೆದಿಲ್ಲ. ಹಾಗಾದ್ರೆ ಅಧಿಕಾರಿಗಳು ಮಣ್ಣು ಕಳ್ಳರ ಜೊತೆ ಶಾಮೀಲಾಗಿದ್ದಾರೆ ಎಂಬ ಪ್ರಶ್ನೆ ಮೂಡಿದೆ.
ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿರುವ ಮಣ್ಣು ಕಳ್ಳತನಕ್ಕೆ ಯಾರು ಕಾರಣ ಎನ್ನುವುದು ಸ್ಥಳೀಯರಿಗೆ ತಿಳಿದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣಕ್ಕೆ ಕ್ರಮ ಜರುಗಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಮತ್ತು 20 ದಲಿತ ಕುಟುಂಬಗಳನ್ನು ಅಪಾಯದಿಂದ ಕಾಪಾಡಬೇಕಾಗಿದೆ.

